ಖರ್ಗೆ ಹತ್ಯೆಗೆ ಬಿಜೆಪಿ ಅಭ್ಯರ್ಥಿಯಿಂದ ಸಂಚು: ಕಾಂಗ್ರೆಸ್‌ ಆಡಿಯೋ ಬಾಂಬ್‌

ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರ ಹತ್ಯೆಗೆ ಬಿಜೆಪಿ (BJP) ಅಭ್ಯರ್ಥಿ ಸಂಚು ರೂಪಿಸಿದ್ದಾರೆ ಎಂದು ಕಾಂಗ್ರೆಸ್‌ ಆಡಿಯೋ ಬಾಂಬ್‌ ಸಿಡಿಸಿಸಿದೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಚಿತ್ತಾಪುರ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್ (Manikanth Rathod) ಮತ್ತು ಬಿಜೆಪಿ ಕಾರ್ಯಕರ್ತ ರವಿ ಮಧ್ಯೆ ನಡೆದ ಸಂಭಾಷಣೆಯ ಆಡಿಯೋವನ್ನು ಸುರ್ಜೇವಾಲಾ (Randeep Surjewala) ಬಿಡುಗಡೆ ಮಾಡಿದ್ದಾರೆ.

ಚಿತ್ತಾಪುರ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್ ಮೂಲಕ ಜೀವ ಬೆದರಿಕೆ ಹಾಕಲಾಗಿದೆ. ಖರ್ಗೆ ಹೆಂಡತಿ, ಮಕ್ಕಳನ್ನು ಸಾಫ್ ಮಾಡುತ್ತೇನೆ ಎಂಬ ಸಂಭಾಷಣೆಯಿದೆ. ಬಿಜೆಪಿಯವರು ಖರ್ಗೆಯವರ ಕುಟುಂಬಕ್ಕೆ ಹಿಂಸೆ ನೀಡುತ್ತಿದ್ದಾರೆ ಎಂದು ಸುರ್ಜೇವಾಲಾ ಕಿಡಿಕಾರಿದರು.  ಇದನ್ನೂ ಓದಿ: ದಾಖಲೆ ಬರೆದ ಮೋದಿ ಬೆಂಗಳೂರು ರೋಡ್ ಶೋ

ಚುನಾವಣೆಯಲ್ಲಿ ಸೋಲಿನ ಭೀತಿಯಿಂದ ಬಿಜೆಪಿಯವರು ಖರ್ಗೆ ಹತ್ಯೆಗೆ ಉತ್ತೇಜನ ನೀಡುತ್ತಿದ್ದಾರೆ. ಒಬ್ಬ ದಲಿತ ವ್ಯಕ್ತಿ ಈ ಮಟ್ಟಕ್ಕೆ ಬೆಳೆದಿರುವುದು ಅವರಿಗೆ ಸಹಿಸಲು ಆಗುತ್ತಿಲ್ಲ. ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್ ಆಡಿಯೋ ಬಗ್ಗೆ ಪ್ರಧಾನಿ ಮೋದಿ ಆಗಲಿ, ಸಿಎಂ ಬೊಮ್ಮಾಯಿ ಚುನಾವಣಾ ಆಯೋಗವಾಗಲಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವಾಗ್ದಾಳಿ ನಡೆಸಿದರು.

 

ದೆಹಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಮೋದಿ ಸರ್ಕಾರಕ್ಕೆ ದುಃಸ್ವಪ್ನದಂತೆ ಕಾಡುತ್ತಿದ್ದರೆ ಕರ್ನಾಟಕದಲ್ಲಿ ಪ್ರಿಯಾಂಕ್‌ ಖರ್ಗೆ ಅವರು ಇಲ್ಲಿನ ಬಿಜೆಪಿ ಸರ್ಕಾರಕ್ಕೆ ಎಡೆಬಿಡದೆ ಕಾಡಿದ್ದಾರೆ. ಹಲವು ಹಗರಣಗಳನ್ನು ಪ್ರಶ್ನಿಸಿದ್ದಾರೆ. ಈ ಕಾರಣಕ್ಕೆ ಇಡೀ ಖರ್ಗೆ ಕುಟುಂಬವನ್ನು ಮುಗಿಸುವ ಸಂಚೇ ಎಂದು ಬಿಜೆಪಿಯನ್ನು ಕಾಂಗ್ರೆಸ್‌ ಪ್ರಶ್ನಿಸಿದೆ.