ಸಂಪುಟದ ನಾಲ್ವರು ಹಾಲಿ ಸಚಿವರಿಗೆ ಕೈ ನಾಯಕರಿಂದ ಕೋಕ್?

ಬೆಳಗಾವಿ: ಸಂಪುಟ ವಿಸ್ತರಣೆಯಲ್ಲಿ ನಮಗೂ ಸಚಿವ ಸ್ಥಾನ ಬೇಕು ಎನ್ನುವವರ ಸಂಖ್ಯೆ ಹೆಚ್ಚಾಗಿರುವುದರಿಂದ ನಾಲ್ವರು ಹಾಲಿ ಶಾಸಕರನ್ನು ಕೈ ಬಿಡಲು ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಈ ಮೂಲಕ ಡಿಸೆಂಬರ್ 22ರಂದು ನಡೆಯುವುದು ಸಂಪುಟ ವಿಸ್ತರಣೆಯೋ? ಅಥವಾ ಪುನರಚನೆಯೋ ಎನ್ನುವ ಪ್ರಶ್ನೆ ಶುರುವಾಗಿದೆ. ಸಂಪುಟ ಪುನರ್ ರಚನೆ ಮಾಡುವಂತೆ ಕಾಂಗ್ರೆಸ್‍ನ ಕೆಲವು ಹಿರಿಯ ಶಾಸಕರ ಪಟ್ಟು ಹಿಡಿದಿದ್ದಾರಂತೆ. ಹೀಗಾಗಿ ಅವರ ಒತ್ತಡಕ್ಕೆ ಮಣಿದ ನಾಯಕರು, ನಾಲ್ವರು ಸಚಿವರ ಹೆಸರನ್ನು ಮಂತ್ರಿಗಿರಿಯಿಂದ ಕೈಬಿಡುವ ಪಟ್ಟಿಗೆ ಸೇರಿಸಿದ್ದಾರೆ ಎನ್ನಲಾಗಿದೆ.

ಯಾರೆಲ್ಲ ಸಂಪುಟದಿಂದ ಔಟ್:
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಜಯಮಾಲಾ, ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಸಚಿವ ಆರ್.ಶಂಕರ್, ಕಾರ್ಮಿಕ ಸಚಿವ ವೆಂಕಟರಮಣಪ್ಪ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರನ್ನು ಸಂಪುಟದಿಂದ ಕೈಬಿಡುವ ನಿರ್ಧಾರವನ್ನು ಕೈ ನಾಯಕರು ತೆಗೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಈ ಮಂತ್ರಿಗಳ ಪಟ್ಟಿಯನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೂ ಕಳುಹಿಸಲಾಗಿದೆ ಎಂಬುದಾಗಿ ಪಕ್ಷದ ಮೂಲಗಳಿಂದ ಪಬ್ಲಿಕ್ ಟಿವಿ ಮಾಹಿತಿ ಲಭಿಸಿದೆ.

ಸಂಪುಟ ಪುನಾರಚನೆಯ ಕುರಿತು ಡಿಸೆಂಬರ್ 21ರಂದು ರಾಜ್ಯ ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲಿದ್ದಾರೆ. ಈ ವೇಳೆ ಚರ್ಚೆ ನಡೆಸಿ ಯಾರಿಗೆ ಮಂತ್ರಿಗಿರಿ ನೀಡಬೇಕು ಎನ್ನುವ ಕುರಿತು ಸುದೀರ್ಘ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ಸಂಪುಟ ವಿಸ್ತರಣೆ ವಿಚಾರ ಹೊರ ಬೀಳುತ್ತಿದ್ದಂತೆ ಮಾಜಿ ಸಚಿವ ಎಂ.ಬಿ.ಪಾಟೀಲ್, ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್, ಕೂಡ್ಲಿಗಿ ಶಾಸಕ ನಾಗೇಂದ್ರ ಸೇರಿದಂತೆ ಅನೇಕರು ಮಂತ್ರಿಗಿರಿಗಾಗಿ ಲಾಭಿ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಬಣದ ನಾಯಕರ ಮೂಲಕ ಹೈಕಮಾಂಡ್ ಮಟ್ಟದಲ್ಲಿ ಸಚಿವ ಸ್ಥಾನಕ್ಕೆ ಒತ್ತಾಯಿಸಿದ್ದಾರೆ ಎನ್ನಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *