ಹಿರಿಯ ವ್ಯಕ್ತಿಗಳ ಮೇಲೆ ರಾಡ್, ಬಡಿಗೆಯಿಂದ ಹೊಡೆದ ಕೈ ಮುಖಂಡ

ಉಡುಪಿ: ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಹಿರಿಯ ನಾಗರಿಕರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಬೈಂದೂರಲ್ಲಿ ನಡೆದಿದೆ.

ಬಡಿಯಾ ಮಾಸ್ಟರ್ ಮತ್ತು ಪೋಸ್ಟ್ ಮಾಸ್ಟರ್ ಜನಾರ್ದನ ಎಂಬವರ ಮೇಲೆ ರಾಡ್ ಮತ್ತು ಬಡಿಗೆಯಿಂದ ದಾಳಿ ಮಾಡಲಾಗಿದೆ. ಬೈಂದೂರು ತಾಲೂಕು ಪಂಚಾಯತ್ ಸದಸ್ಯ, ಕಾಂಗ್ರೆಸ್ ಮುಖಂಡ ವಿಜಯ ಶೆಟ್ಟಿ ಹಲ್ಲೆ ಮಾಡಿ ತಲೆಮರೆಸಿಕೊಂಡಿದ್ದಾನೆ.

ಹೊಡೆದ ಪರಿಣಾಮ ಬಡಿಯ ಮಾಸ್ಟರ್ ಕೈ ಮುರಿತಕ್ಕೊಳಗಾಗಿದ್ದು, ಜನಾರ್ದನ್ ತಲೆಗೆ ಬಲವಾದ ರಾಡಿನಿಂದ ಹೊಡೆತ ಬಿದ್ದಿದೆ. ಇಬ್ಬರು ಹಿರಿಯ ನಾಗರೀಕರನ್ನು ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ.

ವಿಜಯ ಶೆಟ್ಟಿ ಸರ್ಕಾರಿ ಜಮೀನಿನ ಕಬ್ಜ, ಮಟ್ಕಾ ದಂಧೆ, ಗೂಡಂಗಡಿಯಲ್ಲಿ ಸಾರಾಯಿ ಮಾರಾಟ ಸೇರಿದಂತೆ ಹಲವು ಅಕ್ರಮಗಳನ್ನು ಮಾಡುತ್ತಿದ್ದು ಈ ಬಗ್ಗೆ ಎಸಿಬಿಗೆ ಗ್ರಾಮಸ್ಥರು ದೂರು ನೀಡಿದ್ದರು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸಿಬಿ ಅಧಿಕಾರಿಗಳು ತನಿಖೆಯನ್ನು ಮಾಡಿದಾಗ ಸಾಕ್ಷಿ ಹೇಳಿದಕ್ಕೆ ನಮ್ಮಿಬ್ಬರ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಗಾಯಾಳುಗಳು ದೂರಿದ್ದಾರೆ. ಆದರೆ ಆರೋಪಿ ವಿಜಯ ಶೆಟ್ಟಿ ಕಡೆಯವರು ಇಬ್ಬರು ಗಾಯಾಳುಗಳ ಮೇಲೆಯೇ ದೂರು ನೀಡಿದ್ದಾರೆ.

ಸದ್ಯಕ್ಕೆ ಇಬ್ಬರ ಕಡೆಯವರೂ ನೀಡಿರುವ ದೂರಿನ ಆಧಾರದ ಮೇಲೆ ಬೈಂದೂರು ಠಾಣೆಯಲ್ಲಿ ಇಬ್ಬರ ಮೇಲೂ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಾಪತ್ತೆಯಾಗಿರುವ ವಿಜಯ್ ಶೆಟ್ಟಿ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *