ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸರ್ಕಾರ ರಚನೆಯ ಬೆನ್ನಲ್ಲೇ ಲೋಕಸಭೆಗೂ ನಮ್ಮ ಮೈತ್ರಿ ಮುಂದುವರಿಯಲಿದೆ ಎಂದು ಉಭಯ ನಾಯಕರು ಹೇಳಿಕೊಂಡಿದ್ದರು. ಲೋಕಸಭೆ ಚುನಾವಣೆಗೆ 12 ಸ್ಥಾನದ ಬೇಡಿಕೆ ಇಟ್ಟಿದ್ದ ಜೆಡಿಎಸ್ ದಿಢೀರ್ ಅಂತ ಕಾಂಗ್ರೆಸ್ ಮುಂದೆ ನವಸೂತ್ರದ ತಂತ್ರವನ್ನು ಇರಿಸಿದೆ.
ಲೋಕಸಭಾ ಚುನಾವಣೆಯಲ್ಲಿ ತನಗೆ 12 ಸ್ಥಾನ ಬೇಕು ಎಂದು ಪಟ್ಟು ಹಿಡಿದಿದ್ದ ಜೆಡಿಎಸ್ ಈಗ 9 ಸ್ಥಾನಕ್ಕೆ ಒಪ್ಪಿಕೊಂಡಿದೆ. ತಮ್ಮ ಬೇಡಿಕೆಯ 9 ಸ್ಥಾನ ಬಿಟ್ಟುಕೊಡಿ ಆ ಎಲ್ಲ ಕ್ಷೇತ್ರಗಳನ್ನು ಗೆದ್ದುಕೊಂಡು ಬರುತ್ತೇವೆ ಎಂದು ಕಾಂಗ್ರೆಸ್ ಪಾಳಯಕ್ಕೆ ಜೆಡಿಎಸ್ ನಾಯಕರು ಮಾಹಿತಿ ರವಾನಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಮಂಡ್ಯ, ಹಾಸನ, ಮೈಸೂರು, ಬೆಂಗಳೂರು ಉತ್ತರ, ತುಮಕೂರು, ಚಿಕ್ಕಬಳ್ಳಾಪುರ, ಶಿವಮೊಗ್ಗ, ಬೀದರ್ ಹಾಗೂ ರಾಯಚೂರು ಈ ಒಂಬತ್ತು ಕ್ಷೇತ್ರಗಳನ್ನು ನಮಗೆ ಬಿಟ್ಟುಕೊಟ್ಟರೆ ಗೆಲ್ಲಿಸಿಕೊಂಡು ಬರುತ್ತವೆ. ಉಳಿದ 19 ಕ್ಷೇತ್ರಗಳಲ್ಲಿ ಜೆಡಿಎಸ್ ನಿಮಗೆ ಸಂಪೂರ್ಣ ಬೆಂಬಲ ನೀಡಲಿದೆ. 12 ಸ್ಥಾನ ಬೇಕು ಅನ್ನುತ್ತಿದ್ದ ಜೆಡಿಎಸ್ ನಾಯಕರು ಈಗ ಏಕಾಏಕಿ 9 ಸ್ಥಾನದ ಬೇಡಿಕೆ ಇಟ್ಟಿದ್ದು ಕಾಂಗ್ರೆಸ್ ಪಾಳಯದಲ್ಲಿ ಅಚ್ಚರಿಗೆ ಕಾರಣವಾಗಿದೆ. ಜೆಡಿಎಸ್ ನಾಯಕರ ಬೇಡಿಕೆ ಬಗ್ಗೆ ಹೈಕಮಾಂಡ್ ಗಮನಕ್ಕೆ ತಂದು, ಅಂತಿಮವಾಗಿ ಸಮನ್ವಯ ಸಮಿತಿಯಲ್ಲಿ ಚರ್ಚಿಸುವ ಭರವಸೆಯನ್ನ ಕಾಂಗ್ರೆಸ್ ನಾಯಕರು ಹೇಳಿದ್ದಾರೆ ಎನ್ನಲಾಗುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply