ಮಂಡ್ಯದಲ್ಲಿ ದೋಸ್ತಿಗಳ ನಡ್ವೆ ವಾರ್- ಅಶ್ಲೀಲ ಪದಗಳಿಂದ ನಿಂದಿಸಿ ಹಲ್ಲೆಗೆ ಮುಂದಾದ ಅನ್ನದಾನಿ

ಮಂಡ್ಯ: ಅಭಿವೃದ್ಧಿ ಕಾಮಗಾರಿ ವಿಷಯಕ್ಕೆ ಸಂಬಂಧಿಸಿದಂತೆ ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ಜಗಳ ಬೀದಿಗೆ ಬಂದಿದೆ. ಮಾಜಿ ಶಾಸಕ ನರೇಂದ್ರಸ್ವಾಮಿ ಬೆಂಬಲಿಗರನ್ನು ಹಾಲಿ ಶಾಸಕ ಅನ್ನದಾನಿ ಬಹಿರಂಗವಾಗಿಯೇ ಅವಾಚ್ಯವಾಗಿ ನಿಂದಿಸುತ್ತಾ ತೆಂಗಿನಕಾಯಿಂದ ಹಲ್ಲೆ ನಡೆಸಲು ಹೋದ ಘಟನೆ ನಡೆದಿದೆ.

ಮಳವಳ್ಳಿ ತಾಲೂಕು ಮಾಗನೂರು ಬಳಿ ಪಾಲಿಟೆಕ್ನಿಕ್ ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿಗೆ ಇಂದು ಶಾಸಕ ಅನ್ನದಾನಿ ಭೂಮಿ ಪೂಜೆ ನೆರವೇರಿಸಲು ಆಗಮಿಸಿದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಮಾಜಿ ಶಾಸಕ ನರೇಂದ್ರಸ್ವಾಮಿ ಬೆಂಬಲಿಗರು, ಸಿದ್ದರಾಮಯ್ಯ ಸಿಎಂ ಆಗಿ ನರೇಂದ್ರಸ್ವಾಮಿ ಶಾಸಕರಾಗಿದ್ದಾಗ ಭೂಮಿ ಪೂಜೆ ಮಾಡಿ, ಶಂಕುಸ್ಥಾಪನೆ ನೆರವೇರಿಸಲಾಗಿದೆ. ಇಂದು ಇದೇ ಸ್ಥಳದಲ್ಲಿ ಶಾಸಕ ಅನ್ನದಾನಿ ಮತ್ತೊಮ್ಮೆ ಶಂಕುಸ್ಥಾಪನೆ ನೆರವೇರಿಸಲು ಬಂದಿದ್ದಾರೆ ಎಂದು ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದರು.

ಈ ವೇಳೆ ಹಾಲಿ ಶಾಸಕ ಅನ್ನದಾನಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ, ತಳ್ಳಾಟ ನೂಕಾಟ ನಡೆದು ಸ್ಥಳದಲ್ಲಿ ಬಿಗುವಿನ ವಾತಾವರಣ ಏರ್ಪಟ್ಟಿತ್ತು. ತಾಳ್ಮೆ ಕಳೆದುಕೊಂಡ ಶಾಸಕ ಅನ್ನದಾನಿ, ಕಾಂಗ್ರೆಸ್ ಕಾರ್ಯಕರ್ತರನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಅಲ್ಲದೆ ಸರ್ಕಾರಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸ್ತೀರೇನ್ರೋ. ಎಲ್ಲರನ್ನು ಜೈಲಿಗೆ ಕಳುಹಿಸುತ್ತೀನಿ ಎಂದು ಕೈಯಲ್ಲಿದ್ದ ತೆಂಗಿನಕಾಯಿಯಿಂದ ಹಲ್ಲೆ ನಡೆಸಲು ಮುಂದಾದರು.

ಈ ವೇಳೆ ಮಧ್ಯೆ ಪ್ರವೇಶಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಲು ಹರಸಾಹಸಪಟ್ಟರು. ಕಾರ್ಯಕ್ರಮದ ನಂತರ ಮಾತನಾಡಿದ ಶಾಸಕ ಅನ್ನದಾನಿ, ನಾನೇನು ಶಂಕುಸ್ಥಾಪನೆ ನೆರವೇರಿಸಲು ಇಲ್ಲಿಗೆ ಬರಲಿಲ್ಲ. ಇಂದಿನಿಂದ ಕೆಲಸ ಆರಂಭಿಸಲು ಶುಭವಾಗಲಿ ಎಂದು ಪೂಜೆ ಮಾಡಲು ಮಾತ್ರ ಬಂದಿದ್ದೆ. ಇದನ್ನೇ ತಪ್ಪಾಗಿ ತಿಳಿದು ಉದ್ದೇಶಪೂರ್ವಕವಾಗಿ ನರೇಂದ್ರಸ್ವಾಮಿ ಬೆಂಬಲಿಗರು ತೊಂದರೆ ಕೊಟ್ಟಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

Comments

Leave a Reply

Your email address will not be published. Required fields are marked *