ಈಶ್ವರಪ್ಪ ರಾಜೀನಾಮೆ ಪಡೆದು ತಿಪ್ಪೆ ಸಾರಿಸುವುದಲ್ಲ, ಬಂಧಿಸಿ ಜೈಲಿಗಟ್ಟಬೇಕು: ಕಾಂಗ್ರೆಸ್‌

ಬೆಂಗಳೂರು: ಬರೀ ಈಶ್ವರಪ್ಪನವರ ರಾಜೀನಾಮೆ ಪಡೆದು ತಿಪ್ಪೆ ಸಾರಿಸುವುದಲ್ಲ, ಬಂಧಿಸಿ ಜೈಲಿಗಟ್ಟಬೇಕು ಎಂದು ಸರ್ಕಾರವನ್ನು ರಾಜ್ಯ ಕಾಂಗ್ರೆಸ್‌ ಒತ್ತಾಯಿಸಿದೆ.

ಈಶ್ವರಪ್ಪ ವಿರುದ್ಧ ಸರಣಿ ಟ್ವೀಟ್‌ ಮಾಡಿರುವ ಕಾಂಗ್ರೆಸ್‌, ಈಶ್ವರಪ್ಪ ಅವರನ್ನು ಜೈಲಿಗಟ್ಟಬೇಕು. ಭ್ರಷ್ಟಾಚಾರ ನಿಗ್ರಹದ ಪ್ರಕರಣ ದಾಖಲಾಗಬೇಕು. ಇದ್ಯಾವುದನ್ನೂ ಮಾಡದೆ ಸರ್ಕಾರ ರಕ್ಷಣೆಗೆ ನಿಂತರೆ ಹಿಂದೂ ಕಾರ್ಯಕರ್ತ ಸಂತೋಷ್ ಪಾಟೀಲ್‌ಗೆ ಅವಮಾನಿಸಿದಂತೆ. ದೇಶದ ಕಾನೂನಿನ ಮೇಲಿನ ಜನರ ನಂಬಿಕೆಯನ್ನು ಅಪಹಾಸ್ಯ ಮಾಡಿದಂತಾಗುತ್ತದೆ ಎಂದು ಎಚ್ಚರಿಸಿದೆ.

ಟ್ವೀಟ್‌ನಲ್ಲೇನಿದೆ?
ಮೊನ್ನೆ, ನೂರಕ್ಕೆ ನೂರು ರಾಜೀನಾಮೆ ಕೊಡುವುದಿಲ್ಲ. ನಿನ್ನೆ, ರಾಜೀನಾಮೆ ನೀಡುತ್ತೇನೆ ಎಂಬುದು ಈಶ್ವರಪ್ಪ ಅವರ ಸದಾರಮೆ ನಾಟಕದ ಡೈಲಾಗ್‌ಗಳು. ಕೇವಲ ರಾಜೀನಾಮೆಯ ಮೂಲಕ ಪ್ರಕರಣವನ್ನು ತಿಳಿಗೊಳಿಸುವ ಹುನ್ನಾರವಿದು. ರಾಜೀನಾಮೆಯಷ್ಟೇ ಸಾಲದು ಭ್ರಷ್ಟಾಚಾರ, ಕೊಲೆ ಎರಡೂ ಪ್ರಕರಣಗಳಲ್ಲಿ ಬಂಧನವಾಗಲೇಬೇಕು.

ಸಂತೋಷ್ ಮಾಡಿದ ಕಾಮಗಾರಿಗೆ ಕಾರ್ಯಾದೇಶವೇ ಇರಲಿಲ್ಲ, ಸರ್ಕಾರಕ್ಕೂ ಕಾಮಗಾರಿಗೂ ಸಂಬಂಧವೇ ಇಲ್ಲ ಎನ್ನುತ್ತಿದ್ದರು ಬಿಜೆಪಿಗರು. ಆದರೆ ಈಗ ಮುರುಗೇಶ್ ನಿರಾಣಿ ಸಂಪೂರ್ಣ ಮೊತ್ತವನ್ನು ಬಿಡುಗಡೆ ಮಾಡಿಸುತ್ತೇವೆ ಎನ್ನುವ ಮೂಲಕ ತಪ್ಪನ್ನು ಒಪ್ಪಿಕೊಳ್ಳತೊಡಗಿದ್ದಾರೆ. ಅಂದರೆ ಇಷ್ಟು ದಿನ ಈಶ್ವರಪ್ಪ ತಡೆಹಿಡಿದಿದ್ದರು ಎಂದಾಯಿತು.

ರಾಜೀನಾಮೆ ಘೋಷಣೆ ಮಾಡಿ ಅಧಿಕೃತವಾಗಿ ನೀಡಲು ಸಾಕಷ್ಟು ಸಮಯ ತೆಗೆದುಕೊಂಡ ಈಶ್ವರಪ್ಪ ತರಾತುರಿಯಲ್ಲಿ 29 ಪಿಡಿಓಗಳನ್ನು ವರ್ಗಾವಣೆ ಮಾಡಿದ್ದಾರೆ. ಈ ತರಾತುರಿಯ ವರ್ಗಾವಣೆಯಲ್ಲಿ ಎಷ್ಟು ಪರ್ಸೆಂಟ್ ಹಗರಣವಿದೆ? ಇನ್ನುಳಿದ ಗುತ್ತಿಗೆದಾರರಿಂದ ಬಾಕಿಯಿದ್ದ 40 ಪರ್ಸೆಂಟ್‌ ವಸೂಲಿಗಾಗಿಯೇ ಇಷ್ಟು ಸಮಯ ತಗೆದುಕೊಂಡಿದ್ದಾ ಎಂದು ಸರ್ಕಾರವನ್ನು ಕಾಂಗ್ರೆಸ್‌ ಪ್ರಶ್ನಿಸಿದೆ.

 

Comments

Leave a Reply

Your email address will not be published. Required fields are marked *