ಜೆಪಿಸಿ ತನಿಖೆಗೆ ಆಗ್ರಹಿಸಿ ಪ್ರತಿಭಟನೆ- ಪ್ರತಿಪಕ್ಷಗಳ ನಾಯಕರನ್ನು ವಶಕ್ಕೆ ಪಡೆದ ಪೊಲೀಸರು

ನವದೆಹಲಿ: ಅದಾನಿ ಕಂಪನಿಗಳಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ ಅಮೆರಿಕಾ ಮೂಲದ ಸಂಸ್ಥೆ ಹಿಂಡೆನ್‍ಬರ್ಗ್ (Hindenburg) ನೀಡಿರುವ ವರದಿ ಆಧರಿಸಿ ಜಂಟಿ ಸದನ ಸಮಿತಿ ತನಿಖೆಗೆ ನೀಡಬೇಕು ಎಂದು ವಿರೋಧ ಪಕ್ಷಗಳ ನಾಯಕರು ಪಟ್ಟು ಹಿಡಿದಿದ್ದಾರೆ. ಇಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ (Mallikarjun Kharge) ನೇತೃತ್ವದಲ್ಲಿ 14 ಪಕ್ಷಗಳ ನಾಯಕರು ಪ್ರತಿಭಟನೆ ನಡೆಸಿದರು.

ಸಂಸತ್‍ನಿಂದ ಮೆರವಣಿಗೆ ಹೊರಟ ನಾಯಕರು ವಿಜಯಚೌಕ್‍ವರೆಗೂ ಮೆರವಣಿಗೆ ನಡೆಸಿದರು. ಸಂಸತ್ ಆವರಣದ ಸುತ್ತ ಬಿಗಿ ಭದ್ರತೆ ಏರ್ಪಡಿಸಿದ್ದ ದೆಹಲಿ ಪೊಲೀಸರು (Delhi Police) 144 ಸೆಕ್ಷನ್ ಜಾರಿ ಮಾಡಿದ್ದರು. ವಿಜಯಚೌಕ್‍ನಿಂದ ಮುಂದೆ ಪ್ರತಿಭಟನೆ ಮೆರವಣಿಗೆ ನಡೆಸದಂತೆ ಮನವಿ ಮಾಡಿದರು. ಅದಾಗ್ಯೂ ಪ್ರತಿಭಟನೆಗೆ ಪ್ರಯತ್ನಿಸಿದ ಎಲ್ಲ ನಾಯಕರನ್ನು ಪೊಲೀಸರು ವಶಕ್ಕೆ ಪಡೆದರು. ಇದನ್ನೂ ಓದಿ: ಸಂಸದ ಸ್ಥಾನದಿಂದ ರಾಹುಲ್‌ ಗಾಂಧಿ ಅನರ್ಹ

ಈ ವೇಳೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಜಂಟಿ ಸಂಸದೀಯ ಸಮಿತಿಗೆ ಒತ್ತಾಯಿಸಿ ನಾವು ಪ್ರತಿಭಟನೆ ನಡೆಸುತ್ತಿದ್ದೇವೆ. ಲಲಿತ್ ಮೋದಿ, ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಸರ್ಕಾರದಿಂದ ಕೋಟ್ಯಂತರ ರೂಪಾಯಿ ಲೂಟಿ ಮಾಡಿ ಈ ದೇಶದಿಂದ ಪಲಾಯನ ಮಾಡಿದ್ದಾರೆ. ಪ್ರಧಾನಿ ಮೋದಿ ಅವರ ಬಗ್ಗೆ ಮಾತನಾಡುವುದಿಲ್ಲ, ಜೆಪಿಸಿ ತನಿಖೆಗೆ ನೀಡುತ್ತಿಲ್ಲ, ಪ್ರಧಾನಿ ಮೋದಿ ಅವರು ಜನರಿಂದ ಏನನ್ನಾದರೂ ಮುಚ್ಚಿಡಲು ಬಯಸುತ್ತಿದ್ದಾರಾ ಎಂದು ಪ್ರಶ್ನಿಸಿದರು.

ಲಂಡನ್ ನಲ್ಲಿ ರಾಹುಲ್ ಗಾಂಧಿ (Rahul Gandhi) ನೀಡಿದ ಹೇಳಿಕೆಗೆ ವ್ಯಕ್ತವಾಗಿರುವ ಟೀಕೆ ಬಗ್ಗೆ ಮಾತನಾಡಿದ ಅವರು, ಸಂಸತ್ತಿನಲ್ಲಿ ಮಾತನಾಡಲು ರಾಹುಲ್ ಗಾಂಧಿಗೆ ಅವಕಾಶ ನೀಡುತ್ತಿಲ್ಲ. ಮಾತನಾಡಲು ಅನುಮತಿ ಕೋರಿ ಇಂದು ಪತ್ರ ಬರೆದರೂ ಅವಕಾಶ ನೀಡಿಲ್ಲ. ಇದೇ ರೀತಿ ಮುಂದುವರಿದರೆ ಈ ದೇಶದಲ್ಲಿ ಸರ್ವಾಧಿಕಾರ ಬರುತ್ತದೆ ಎಂದು ಖರ್ಗೆ ಹೇಳಿದರು.

Comments

Leave a Reply

Your email address will not be published. Required fields are marked *