ಆಪ್ತರ ಪರ ಲಾಬಿಗೆ ದೆಹಲಿಗೆ ತೆರಳಲು ಸಿದ್ಧರಾಗಿದ್ದವರಿಗೆ ಶಾಕ್

ಬೆಂಗಳೂರು: ಕಾಂಗ್ರೆಸ್‍ನ ಖಾತೆ ಹಂಚಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ಇಂದು ನವದೆಹಲಿಯಲ್ಲಿ ಮಹತ್ವದ ಸಭೆ ನಡೆಯಲಿದ್ದು, ಈ ಸಭೆಗೆ ಕಾಂಗ್ರೆಸ್ ನಾಯಕರ ದೆಹಲಿಯ ಭೇಟಿಯನ್ನು ದಿಢೀರ್ ರದ್ದು ಮಾಡಿದ್ದಾರೆ.

ವಿದೇಶ ಪ್ರವಾಸದಿಂದ ಬೆಳಗ್ಗೆ ವಾಪಸ್ ಆಗಲಿರುವ ರಾಹುಲ್ ಗಾಂಧಿ ಮಧ್ಯಾಹ್ನದ ಬಳಿಕ ರಾಜ್ಯ ಕಾಂಗ್ರೆಸ್ ನಾಯಕರೊಂದಿಗೆ ದೆಹಲಿಯ ತಮ್ಮ ನಿವಾಸದಲ್ಲಿ ಸಭೆ ನಡೆಸಲಿದ್ದಾರೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್‍ಗೆ ತಮ್ಮ ಆಪ್ತರ ಪರ ಲಾಬಿಗೆ ದೆಹಲಿಗೆ ಹೋಗಲು ಸಿದ್ಧರಾಗಿದ್ದರು. ಆದರೆ ಈಗ ನೀವು ದೆಹಲಿಗೆ ಬರೋದೇ ಬೇಡ ಎಂದು ಕಾಂಗ್ರೆಸ್ ಹೈಕಮಾಂಡ್ ಸಂದೇಶ ರವಾನಿಸಿದೆ.

ರಾಜ್ಯ ಕಾಂಗ್ರೆಸ್‍ ಉಸ್ತುವಾರಿ ವೇಣುಗೋಪಾಲ್, ಗುಲಾಂ ನಬಿ ಆಜಾದ್ ಮೂಲಕ ರಾಜ್ಯ ನಾಯಕರಿಗೆ ಹೈಕಮಾಂಡ್ ಮಾಹಿತಿ ರವಾನಿಸಿದೆ. ಆದ್ದರಿಂದ ಇಂದು ದೆಹಲಿಗೆ ಹೋಗಲು ಸಿದ್ಧಗೊಂಡಿದ್ದ ಸಿದ್ದರಾಮಯ್ಯ, ಪರಮೇಶ್ವರ್, ಡಿ.ಕೆ ಶಿವಕುಮಾರ್ ಪಯಣ ರದ್ದಾಗಿದೆ.

ದೆಹಲಿಗೆ ನೀವು ಬರುವುದರಿಂದ ಆಕಾಂಕ್ಷಿಗಳು ಬರುತ್ತಾರೆ ಅನ್ನೋ ಭಯ. ಹೀಗಾಗಿ ಸಂಭವನೀಯ ಸಚಿವರ ಪಟ್ಟಿ ತೆಗೆದುಕೊಂಡು ಬರುವುದು ಬೇಡ. ಪಟ್ಟಿ ಒಂದು ಕಳಿಸಿಕೊಡುವಂತೆ ಸೂಚನೆ ನೀಡಲಾಗಿದೆ. ಅವಶ್ಯಕತೆ ಬಿದ್ದರೆ ಮಾತ್ರ ಬರಲು ತಿಳಿಸುತ್ತೇವೆ. ಸದ್ಯಕ್ಕೆ ಬರುವುದು ಬೇಡ ಎಂದು ಹೈಕಮಾಂಡ್ ಸ್ಪಷ್ಟ ಸಂದೇಶ ರವಾನೆ ಮಾಡಿದೆ. ಆದರೆ ಪರಮೇಶ್ವರ್, ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ತಮ್ಮ ಬೆಂಬಲಿಗರ ಪರ ಬ್ಯಾಟಿಂಗ್ ಮಾಡಲು ಭೇಟಿಗೆ ಅವಕಾಶ ಕೇಳಿದ್ದಾರೆ. ರಾಹುಲ್ ಗಾಂಧಿ ಜೊತೆ ಕೇಳಿ ಮಾಹಿತಿ ರವಾನೆ ಮಾಡುತ್ತೇನೆ ಎಂದು ವೇಣುಗೋಪಾಲ್ ತಿಳಿಸಿದ್ದಾರೆ.

ನಾಳೆ ಬೆಳಗ್ಗಿನ ಜಾವ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ದೆಹಲಿಗೆ ವಾಪಸ್ಸಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ನಾಯಕರ ಕೃಪೆ ಇಲ್ಲದ ಶಾಸಕರಿಂದ ದೆಹಲಿಯ ಪಯಣಕ್ಕೆ ಸಿದ್ಧತೆ ಮಾಡಿಕೊಂಡಿತ್ತು. ಇವತ್ತು ಸಂಜೆಯೇ ದೆಹಲಿಗೆ ಹೋಗಿ ವೈಯಕ್ತಿಕವಾಗಿ ಲಾಬಿ ನಡೆಸಲು ನಿರ್ಧಾರ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಈಗಾಗಲೇ 30 ಹೆಸರುಗಳನ್ನು ಅಂತಿಮಗೊಳಿಸಿ ವೇಣುಗೋಪಾಲ್ ಪಟ್ಟಿಯೊಂದನ್ನು ತಯಾರಿಸಿಕೊಂಡು ದೆಹಲಿ ತಲುಪಿದ್ದು ರಾಹುಲ್ ಗಾಂಧಿ ಜೊತೆ ಚರ್ಚೆ ನಡೆಸಿ ಅಂತಿಮ ತೀರ್ಮಾನಕ್ಕೆ ಬರಲಿದ್ದಾರೆ. ನಿರ್ದಿಷ್ಟ ಖಾತೆಗಳು ಕಾಂಗ್ರೆಸ್ ಪಾಲಾಗಿರುವುದರಿಂದ ಖಾತೆ ಹಂಚಿಕೆ ಹೈಕಮಾಂಡ್ ಗೂ ಕಗ್ಗಾಂಟಾಗಿದೆ. ಈ ಹಿನ್ನೆಲೆ ಕಳೆದ ಸರ್ಕಾರದಲ್ಲಿ ಐದು ವರ್ಷ ಸಚಿವ ಸ್ಥಾನದಲ್ಲಿದ್ದ ಹಿರಿಯ ನಾಯಕರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ನೀಡುವ ಬಗ್ಗೆ ಹೈಕಮಾಂಡ್ ಒಲವು ತೋರಿದ್ದು ಯಾರೆಲ್ಲ ಸಚಿವರಾಗಬಹುದು ಎಂಬುದು ಇಂದು ಸಂಜೆ ವೇಳೆಗೆ ತಿಳಿಯುವ ಸಾಧ್ಯತೆ ಇದೆ.

Comments

Leave a Reply

Your email address will not be published. Required fields are marked *