ಮೈಸೂರು: ಸಾಲಮನ್ನಾ ಮಾಡುತ್ತೇವೆ ಎಂದು ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಅವರ ಮಕ್ಕಳಾದ ಸಿಎಂ ಕುಮಾರಸ್ವಾಮಿ ಮತ್ತು ಸಚಿವ ರೇವಣ್ಣ ನಾಡಿನ ಜನತೆಯ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆಂದು ಮಾಜಿ ಸಿಎಂ ಸಿದ್ದರಾಮಯ್ಯನವರ ಪರಮಾಪ್ತ ಮಾಜಿ ಶಾಸಕ ಕೆ. ವೆಂಕಟೇಶ್ ಕಿಡಿಕಾರಿದ್ದಾರೆ.

ಜಿಲ್ಲೆಯ ಪಿರಿಯಾಪಟ್ಟಣದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಮುಖ್ಯಮಂತ್ರಿ ಆಗುತ್ತಾರೆಂದು ಅವರಿಗೆ ಗೊತ್ತಿರಲಿಲ್ಲ. ಅಲ್ಲದೇ ಸಾಂದರ್ಭಿಕ ಮುಖ್ಯಮಂತ್ರಿಯಂದು ಅವರೇ ಹೇಳಿದ್ದಾರೆ. ಅವರು ಚುನಾವಣೆಗೂ ಮುನ್ನ ನಿಮಗೆಲ್ಲ ಭರವಸೆ ಕೊಟ್ಟಿದ್ದು ಹೇಗೆ ಅಂದರೆ ನಾನು ಹೇಗೂ ಮುಖ್ಯಮಂತ್ರಿ ಆಗಲ್ಲ. ಬೇಡಿಕೆ ಈಡೇರಿಸುವ ಪ್ರಶ್ನೆಯೂ ಬರಲ್ಲ ಅಂತಾ ಎಷ್ಟು ಸುಳ್ಳು ಹೇಳ್ಕೋಬೇಕೋ, ಹೇಳಿ ಎಲ್ಲ ಭರವಸೆ ಕೊಟ್ಟಿದ್ದರು. ಏಕೆಂದರೆ 25 ರಿಂದ 30 ಸೀಟ್ ಮೇಲೆ ನಾವು ಗೆಲ್ಲುವುದಿಲ್ಲ ಎನ್ನುವ ವಿಚಾರ ಅವರಿಗೆ ಗೊತಿತ್ತು ಎಂದು ಹೇಳುವ ಮೂಲಕ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಸಿಎಂ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈಗ ಅವರು ಗೆದ್ದಿರುವುದೇ ಮ್ಯಾಕ್ಸಿಮಮ್ ಸೀಟ್. ಯಾವುದೇ ಚುನಾವಣೆ ನಡೆದರೂ ಅವರು ಹಿಂದಕ್ಕೆ ಇರ್ತಾರೆ. ಯಾವತ್ತು ಜೆಡಿಎಸ್ ಮುಂದಕ್ಕೆ ಹೋಗೋದಿಲ್ಲ. ಅಲ್ಲದೇ ನಾವು ಅಧಿಕಾರಕ್ಕೆ ಬಂದರೆ 24 ಗಂಟೆಯಲ್ಲಿ ಸಾಲಮನ್ನಾ ಮಾಡುತ್ತೀವಿ ಎಂದು ಹೇಳಿದ್ದರು. ಈಗ ಅಧಿಕಾರಕ್ಕೆ ಬಂದು ಎಷ್ಟು ತಿಂಗಳಾಯ್ತು? ನಾವು ಕಾಂಗ್ರೆಸ್ ಪಕ್ಷದವರು, ಅವರು ಜನತಾದಳದವರು. ನಾವೇ ಅವರಿಗೆ ಏನು ಮಾಡುತ್ತೀರೋ ಮಾಡಿ ಎಂದು ಹೇಳಿ ಬಿಟ್ಟಿದ್ದೇವೆ. ಇದುವರೆಗೂ ನಾವು ಯಾವುದೇ ತಕರಾರು ಸಹ ಮಾಡಿಲ್ಲ. ಆದರೆ ಅವರು ಯಾವುದೇ ಯೋಜನೆಗಳನ್ನು ಮಾಡದೇ ಸುಮ್ಮನಿದ್ದಾರೆಂದು ಹೇಳುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದರು.

ಕೇಂದ್ರ ಸರ್ಕಾರ ರೈತರ ಸಾಲಮನ್ನಾ ಮಾಡೋ ಚಿಂತನೆಯಲ್ಲಿದೆ ಎಂಬುದು ಇವರಿಗೆ ಮೂರು ತಿಂಗಳ ಮೊದಲೇ ಗೊತ್ತಿತ್ತು. ಅದಕ್ಕೆ ರೈತರಿಗೆ ಯಾರು ಧೃತಿಗೇಡಬೇಡಿ, ಧೈರ್ಯವಾಗಿರಿ ಎಂದು ಹೇಳುತ್ತಿದ್ದರು. ಈಗ ಕೇಂದ್ರ ಸರ್ಕಾರದವರು ರೈತರ ಸಾಲಮನ್ನಾ ಮಾಡುತ್ತಾರೆ. ಈಗಲೂ ಸಹ ನೀವು ಧೈರ್ಯವಾಗಿರಿ ಎಂದು ಹೇಳುತ್ತಿದ್ದಾರೆಂದು ಟೀಕಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply