ಬಿಜೆಪಿಯಿಂದ ಧರ್ಮದ ಆಧಾರದಲ್ಲಿ ಪ್ರಚೋದನೆ: ರಮಾನಾಥ ರೈ

ಮಂಗಳೂರು: ರಾಮನಗರ ಜಿಲ್ಲೆಯ ಕನಕಪುರದಲ್ಲಿ ಯೇಸು ಕ್ರಿಸ್ತನ ಪ್ರತಿಮೆ ಸ್ಥಾಪನೆ ವಿರುದ್ಧ ಪ್ರತಿಭಟನೆ ಮಾಡುವ ಮೂಲಕ ಬಿಜೆಪಿ ಧರ್ಮದ ಆಧಾರದಲ್ಲಿ ಪ್ರಚೋದನೆ ಉಂಟು ಮಾಡುತ್ತಿದೆ. ಈ ಮೂಲಕ ಸಮುದಾಯದ ಬೀದಿಗಿಳಿದಾಗ ರಾಜಕೀಯ ಲಾಭ ಪಡೆಯುವ ಹುನ್ನಾರವನ್ನು ಸೃಷ್ಟಿಸುತ್ತಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಆರೋಪಿಸಿದ್ದಾರೆ.

ಮಂಗಳೂರಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯನ್ನು ಮತೀಯ ಪ್ರಯೋಗಾಲಯ ಮಾಡಲು ಪ್ರಯತ್ನಿಸಿದ ಸಂಘಟನೆಯ ನಾಯಕರು ಕನಕಪುರದಲ್ಲಿ ಪ್ರಚೋದನಕಾರಿಯಾಗಿ ಭಾಷಣ ಮಾಡಿದ್ದಾರೆ. ಜೊತೆಗೆ ಶಾಂತಿ ಹಾಗೂ ಸಹಬಾಳ್ವೆಯನ್ನು ಬಯಸುವ ಸಮುದಾಯವನ್ನು ಪ್ರಚೋದಿಸುವ ಕೆಲಸ ಮಾಡಿದ್ದಾರೆ ಎಂದು ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಹೆಸರು ಹೇಳದೇ ಆಕ್ರೋಶ ವ್ಯಕ್ತಪಡಿಸಿದರು. ಇದನ್ನು ಓದಿ: ವೋಟ್, ಸೀಟ್ ಆಯ್ತು ಈಗ ನೋಟಿಗಾಗಿ ಏಸು ಪ್ರತಿಮೆ: ಡಿಕೆಶಿ ವಿರುದ್ಧ ಕಲ್ಲಡ್ಕ ಕಿಡಿ

ಇಲ್ಲಿನ ಕ್ರೈಸ್ತ ಸಮುದಾಯ ಈ ಹಿಂದೆ ಚರ್ಚ್ ದಾಳಿ ಸಂದರ್ಭದಲ್ಲೂ ಪ್ರಚೋದನೆಗೆ ಒಳಗಾಗದೆ ಸಾಮರಸ್ಯವನ್ನು ಉಳಿಸಿಕೊಂಡಿತ್ತು. ಅಂತಹ ಸಮುದಾಯವನ್ನು ಪ್ರಚೋದನೆಗೊಳಿಸುವ ಕೆಲಸವನ್ನು ಮಾಡಲಾಗುತ್ತಿದೆ. ಬಹುತ್ವದ, ಜಾತ್ಯತೀಯತೆಯ ಶ್ರೀಮಂತ ಇತಿಹಾಸವುಳ್ಳ ಭಾರತದ ಬಗ್ಗೆ ಜಗತ್ತೇ ಕೊಂಡಾಡುತ್ತದೆ. ಆದರೆ ಬಿಜೆಪಿ ಮಾತ್ರ ಧರ್ಮದ ಆಧಾರದಲ್ಲಿ ಆ ಗೌರವಕ್ಕೆ ಚ್ಯುತಿ ತರುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

ಕಲ್ಲಡ್ಕದ ಶ್ರೀರಾಮ ವಿದ್ಯಾ ಸಂಸ್ಥೆಗೆ ಒಂದು ಕೆಜಿ ಅಕ್ಕಿಯೂ ಹೋಗಿಲ್ಲ. ಚೆಕ್ ರೂಪದಲ್ಲಿ ದುಡ್ಡು ಹೋಗಿದೆ. ಅದನ್ನು ಅನ್ನ ದಾಸೋಹಕ್ಕೆ ಬಳಸದೆ ದುರುಪಯೋಗಪಡಿಸಲಾಗಿದೆ. ಪ್ರತಿ ತಿಂಗಳು 4 ಲಕ್ಷ ರೂ. ಚೆಕ್ ಶಾಲೆಗೆ ಪಾವತಿಯಾಗತ್ತಿತ್ತು ಎಂದು ರಮಾನಾಥ ರೈ ದೂರಿದರು.

Comments

Leave a Reply

Your email address will not be published. Required fields are marked *