ಮಂಡ್ಯ: ರಾಜ್ಯದಲ್ಲಿ ನಮ್ಮ ಪಕ್ಷ ಜೆಡಿಎಸ್‍ಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಟ್ಟಿರುವುದು ಸತ್ಯ. ಆದರೆ ಆಡಳಿತದ ಲಕ್ಷಣದಲ್ಲಿ ಸಮ್ಮಿಶ್ರ ಸರ್ಕಾರದ ರೀತಿ ನಡೆಯುತ್ತಿಲ್ಲ ಎಂದು ಬಗ್ಗೆ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಚಲುವರಾಯಸ್ವಾಮಿ ಅಸಮಾಧಾನ ಹೊರಹಾಕಿದ್ದಾರೆ.
ಮದ್ದೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದ ಆದೇಶ ಪಾಲಿಸಲು ಕಾಂಗ್ರೆಸ್ ಮುಖಂಡರು ಬಾಯಿ ಮುಚ್ಚಿಕೊಂಡಿದ್ದಾರೆ. ಅವರು ಹೇಗಾದರು ಆಡಳಿತ ಮಾಡಲಿ. ನಮ್ಮ ಪಕ್ಷ ಅವರಿಗೆ ಅಧಿಕಾರ ಕೊಟ್ಟಿರುವವರೆಗೂ ಸಹಿಸಿಕೊಂಡು ಹೋಗುತ್ತೇವೆ. ಆದರೆ ಮಂಡ್ಯ ಜಿಲ್ಲೆಯಲ್ಲಿ ಏಳು ಸ್ಥಾನ ಗೆಲ್ಲಿಸಿದ್ದಾರೆ ಎಂಬ ಅಹಂ ಅವರಿಗೆ ಬಂದಿದೆ ಎಂದು ಕಿಡಿಕಾರಿದರು.

ಎಲ್ಲದಕ್ಕೂ ಒಂದು ಇತಿಮಿತಿ ಇದೆ. ಆ ಇತಿಮಿತಿ ಮೀರುವವರೆಗೂ ಸಮಾಧಾನದಿಂದ ಇರುತ್ತೇವೆ. ನಮ್ಮ ಜಿಲ್ಲೆಯಲ್ಲಿ ಶಾಂತಿ ವಾತಾವರಣ ಇಲ್ಲ. ಬಹಳಷ್ಟು ವ್ಯವಸ್ಥೆ ಕೆಟ್ಟಿದೆ. ಮುಖ್ಯಮಂತ್ರಿಗಳೇ ಬಂದು ಹೋಗಿರುವುದರಿಂದ ಬದಲಾವಣೆ ಆಗಬಹುದು. ಇಲ್ಲದಿದ್ದರೆ ಎಲ್ಲದ್ದಕ್ಕೂ ಒಂದು ಕೊನೆ ಇರುತ್ತೆ. ಅಲ್ಲಿವರೆಗೂ ಕಾದು ನೋಡುತ್ತೇವೆ. ಆದರೆ ಜಿಲ್ಲೆಯಲ್ಲಿ ಕಾನೂನು ಸಮಸ್ಯೆ ಬಗ್ಗೆ ನಾವು ಅಧಿಕಾರಿಗಳಿಗೆ ಹೇಳುವ ಪರಿಸ್ಥಿತಿ ಜಿಲ್ಲೆಯಲ್ಲಿ ಉಳಿದಿಲ್ಲ ಎಂದು ಆಕ್ರೋಶ ಹೊರ ಹಾಕಿದರು.
ಜೆಡಿಎಸ್ ನಾಯಕರಿಗೆ ಕಾಂಗ್ರೆಸ್ ಪಕ್ಷದವರು ಅಧಿಕಾರ ಕೊಟ್ಟಿದ್ದಾರೆ. ಆದರೆ ಬಿಜೆಪಿಗೆ ತಪ್ಪಿಸಲು ಇವರು ನಮಗೆ ಅಧಿಕಾರ ಕೊಟ್ಟಿದ್ದಾರೆ ಎಂಬ ರೀತಿಯ ಧೋರಣೆ ಜೆಡಿಎಸ್‍ಗೆ ಇದೆ. 38 ಸ್ಥಾನ ಇರುವವರಿಗೆ 80 ಸ್ಥಾನ ಇರುವವರು ಅಧಿಕಾರ ಕೊಟ್ಟರೆ, ಈ ರೀತಿ ಧೋರಣೆಯಲ್ಲಿ ಮಾತನಾಡಿದರೆ ನಾವೇನು ಹೇಳಲು ಸಾಧ್ಯ. ಆದ್ದರಿಂದ ಮಾತನಾಡದಿರುದೇ ಸೂಕ್ತ ಎಂದು ಬೇಸರ ವ್ಯಕ್ತಪಡಿಸಿದರು.
ಇದೇ ವೇಳೆ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಸ್ಪಷ್ಟಪಡಿಸಿದ ಅವರು, ಆದರೆ ನಮ್ಮ ನೋವನ್ನು ತಡೆದುಕೊಂಡಿರುವುದು ಅನಿವಾರ್ಯವಾಗಿದೆ. ಈ ಬಗ್ಗೆ ಚರ್ಚೆ ಮಾಡಿದರು ಪರಿಹಾರ ಸಿಗುವ ಪರಿಸ್ಥಿತಿ ಇಲ್ಲ. ನನಗೆ ಬಾಯಿ ಕಟ್ಟಿದೆ. ಮಾತನಾಡಲು ಆಗುತ್ತಿಲ್ಲ ಎಂದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply