ಉಪಕದನಕ್ಕೆ ಕಾಂಗ್ರೆಸ್ ಪಕ್ಷದ 10 ಅಭ್ಯರ್ಥಿಗಳ ಪಟ್ಟಿ ಅಂತಿಮ

ಬೆಂಗಳೂರು: ರಾಜ್ಯದ 15 ಕ್ಷೇತ್ರಗಳಿಗೆ ಉಪಚುನಾವಣೆ ಹಿನ್ನೆಲೆ ರಾಜ್ಯ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆ ನಡೆಸಿದ್ದು, 15 ಕ್ಷೇತ್ರಗಳಲ್ಲಿ 10 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಿದೆ ಎಂಬ ಮಾಹಿತಿ ಲಭಿಸಿದೆ. ಉಳಿದ 5 ಕ್ಷೇತ್ರಗಳಲ್ಲಿ 2 ರಿಂದ 3 ಟಿಕೆಟ್ ಅಭ್ಯರ್ಥಿಗಳು ಟಿಕೆಟ್ ಪಡೆಯುವ ರೇಸ್‍ನಲ್ಲಿದ್ದಾರೆ.

ಇಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷಯ ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಸೇರಿದಂತೆ ಹಲವು ಹಿರಿಯ ಮುಖಂಡರು ಭಾಗಯಾಗಿದ್ದರು. ಈ ಸಭೆಯಲ್ಲಿ ಚರ್ಚೆ ನಡೆಸಿದ ನಾಯಕರು 10 ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮಗಳಿಸಿದ್ದಾರೆ. ಆದರೆ ಅನರ್ಹ ಶಾಸಕರ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ ನ್ಯಾಯಾಲಯದ ಬೆಳವಣಿಗೆಗಳ ಬಳಿಕ ಚರ್ಚೆ ನಡೆಸಿ ಪಟ್ಟಿಯನ್ನ ಹೈಕಮಾಂಡ್ ಗೆ ರವಾನಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಯಾವ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್?
ಹೊಸಕೋಟೆ-ಪದ್ಮಾವತಿ ಸುರೇಶ್, ಕೆಆರ್ ಪುರಂ-ನಾರಾಯಣಸ್ವಾಮಿ, ಕೆಆರ್ ಪೇಟೆ-ಕೆಬಿ ಚಂದ್ರಶೇಖರ್, ಗೋಕಾಕ್-ಲಖನ್ ಜಾರಕಿಹೊಳಿ, ಕಾಗವಾಡ-ಪ್ರಕಾಶ್ ಹುಕ್ಕೇರಿ, ರಾಣಿ ಬೆನ್ನೂರು-ಕೆ.ಬಿ.ಕೋಳಿವಾಡ, ಹೊಸಕೋಟೆ-ಸೂರ್ಯ ನಾರಾಯಣರೆಡ್ಡಿ, ಹಿರೇಕೆರೂರು- ಬನ್ನಿಕೋಡ್, ಮಹಾಲಕ್ಷ್ಮಿ ಲೇಔಟ್-ಶಿವರಾಜ್ ಕಣಕ್ಕೆ ಇಳಿಯುವುದು ಬಹುತೇಕ ಖಚಿತ ಎನ್ನಲಾಗಿದ್ದು, ಉಳಿದಂತಹ ಕ್ಷೇತ್ರಗಳಾದ ಯಶವಂತಪುರ ಸೇರಿ 5 ಸ್ಥಾನಗಳಿಗೆ ಎರಡರಿಂದ, ಮೂವರು ಅಭ್ಯರ್ಥಿಗಳಲ್ಲಿ ಪೈಪೋಟಿ ಇದೆ ಎಂಬ ಮಾಹಿತಿ ಮಾಹಿತಿ ಲಭಿಸಿದೆ.

ಸಭೆ ಬಳಿಕ ಮಾತನಾಡಿದ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಅವರು, ಬಿಜೆಪಿಯನ್ನು ಚುನಾವಣೆಯಲ್ಲಿ ಮಣಿಸಲು ಕಾಂಗ್ರೆಸ್ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ಸಭೆ ನಡೆಸಿದ್ದು, ಸಭೆಗೆ ವೈಯಕ್ತಿಕ ಕಾರಣದಿಂದ ಮಾಜಿ ಡಿಸಿಎಂ ಪರಮೇಶ್ವರ್ ಗೈರಾಗಿದ್ದಾರೆ. ಇದನ್ನ ವಿಶೇಷ ಸುದ್ದಿ ಮಾಡುವ ಅಗತ್ಯವಿಲ್ಲ ಎಂದು ಹೇಳಿದರು. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ಸುಪ್ರೀಂ ಕೋರ್ಟ್ ಆದೇಶ ನೋಡಿಕೊಂಡು ಆದಷ್ಟು ಬೇಗ ಅಂತಿಮ ಪಟ್ಟಿ ಮಾಡುತ್ತೇವೆ. ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ, ನಾಳೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ ಎಂದು ತಿಳಿಸಿದರು.

Comments

Leave a Reply

Your email address will not be published. Required fields are marked *