ಜೈಲಿಂದ ಹೊರಬಂದ್ರೂ ಡಿಕೆಶಿಗೆ ತಪ್ಪಿಲ್ಲ ಸಂಕಷ್ಟ – ಇಡಿಯಿಂದ ಪಾರಾಗ್ತಾರಾ ತಾಯಿ, ಪತ್ನಿ?

ನವದೆಹಲಿ: ಜಾಮೀನು ಪಡೆದು ಹೊರ ಬಂದರೂ ಕನಕಪುರದ ಬಂಡೆಗೆ ಟೆನ್ಶನ್ ಮಾತ್ರ ತಪ್ಪಿಲ್ಲ. ತಾವೇನೋ ಹರಸಾಹಸ ಪಟ್ಟು 50 ದಿನಗಳ ಬಳಿಕ ಇಡಿ ಬಲೆಯಿಂದ ಹೊರ ಬಂದರು. ಆದರೆ ಈಗ ಜಾರಿ ನಿರ್ದೇಶನಾಲಯ(ಇಡಿ) ಡಿಕೆಶಿ ಪತ್ನಿ ಹಾಗೂ ತಾಯಿಗೆ ಬಲೆ ಬೀಸಿದೆ. ಇಡಿ ನೀಡಿರುವ ಸಮನ್ಸ್ ಸಂಬಂಧ ಇಂದು ದಿಲ್ಲಿ ಹೈಕೋರ್ಟಿನಿಂದ ಮಧ್ಯಂತರ ತೀರ್ಪು ಬರುವ ಸಾಧ್ಯತೆಗಳಿವೆ.

ಡಿ.ಕೆ ಶಿವಕುಮಾರ್ ಅಕ್ರಮ ಹಣ ವರ್ಗಾವಣೆ ಜಾಲ ಕುಟುಂಬಕ್ಕೆ ವಿಸ್ತರಣೆ ಆಗಿದೆ. ಈಗಾಗಲೇ ಸಹೋದರ ಡಿ.ಕೆ ಸುರೇಶ್ ಮತ್ತು ಪುತ್ರಿ ಐಶ್ವರ್ಯ ವಿಚಾರಣೆ ನಡೆಸಿರುವ ಇಡಿ ಅಧಿಕಾರಿಗಳು ಈಗ ಡಿ.ಕೆ ಶಿವಕುಮಾರ್ ಪತ್ನಿ ಉಷಾ ಮತ್ತು ತಾಯಿ ಗೌರಮ್ಮಗೆ ಎರಡನೇ ಬಾರಿ ಸಮನ್ಸ್ ನೀಡಿದ್ದಾರೆ.

ಈ ಹಿಂದೆ ಅಕ್ಟೋಬರ್ 17 ಕ್ಕೆ ವಿಚಾರಣೆ ಬರುವಂತೆ ಡಿಕೆ ತಾಯಿ ಮತ್ತು ಮಡದಿಗೆ ಇಡಿಯಿಂದ ಸಮನ್ಸ್ ನೀಡಲಾಗಿತ್ತು. ಆದರೆ ಸಮನ್ಸ್ ರದ್ದು ಮಾಡಬೇಕು, ಬೆಂಗಳೂರಿನಲ್ಲಿ ವಿಚಾರಣೆ ನಡೆಸಬೇಕು ಅಂತ ಕೋರಿ ಡಿಕೆಶಿ ಪತ್ನಿ ಮತ್ತು ತಾಯಿ ದೆಹಲಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾ. ಬ್ರಿಜೇಶ್ ಸೇಥಿ ನೇತೃತ್ವದ ಏಕ ಸದಸ್ಯ ಪೀಠ ಇಂದಿಗೆ ವಿಚಾರಣೆ ನಿಗದಿ ಮಾಡಿತ್ತು. ಅಲ್ಲದೆ 7 ದಿನಗಳ ಕಾಲ ಸಮನ್ಸ್ ನೀಡದಂತೆ ಇಡಿಗೆ ಸೂಚನೆ ನೀಡಿತ್ತು. ಈಗಾಗಲೇ 7 ದಿನ ಕಳೆದಿರುವ ಹಿನ್ನೆಲೆಯಲ್ಲಿ ನಾಳೆ ವಿಚಾರಣೆ ಬನ್ನಿ ಅಂತ ಡಿಕೆ ತಾಯಿ ಮತ್ತು ಮಡದಿಗೆ ಇಡಿ ಸಮನ್ಸ್ ಜಾರಿ ಮಾಡಿದೆ. ಈ ನಡುವೆ ಸಮನ್ಸ್ ರದ್ದು ಕೋರಿ ಸಲ್ಲಿಸಿದ್ದ ಗೌರಮ್ಮ ಮತ್ತು ಉಷಾ ಸಲ್ಲಿಸಿದ್ದ ಅರ್ಜಿ ಕೂಡ ಇಂದೇ ವಿಚಾರಣೆಗೆ ಬರಲಿದೆ.

ಐಟಿ ಪ್ರಕಣರದಲ್ಲಿ ಅನಾವಶ್ಯಕವಾಗಿ ಇಡಿ ಮೂಗು ತೂರಿಸಿದ್ದು ಇಡೀ ಕುಟುಂಬಸ್ಥರ ವಿಚಾರಣೆ ನಡೆಸುವ ಅವಶ್ಯಕತೆ ಇಲ್ಲ ಅಂತ ದೆಹಲಿ ಹೈಕೋರ್ಟಿನಲ್ಲಿ ಡಿಕೆಶಿ ಪರ ವಕೀಲರು ವಾದ ಮಂಡಿಸಿದರು. ಒಂದು ವೇಳೆ ವಿಚಾರಣೆ ಅತ್ಯವಶ್ಯಕ ಅನ್ನೋದಾದರೆ ಗೌರಮ್ಮ ಅವರಿಗೆ 85 ವರ್ಷ ಆಗಿದ್ದು ದೆಹಲಿಗೆ ಬರಲು ಸಾಧ್ಯವಿಲ್ಲ. ಹೀಗಾಗಿ ಡಿಕೆಶಿ ಪತ್ನಿ ಉಷಾರನ್ನು ಒಳಗೊಂಡು ಗೌರಮ್ಮರನ್ನು ಬೆಂಗಳೂರಿನಲ್ಲಿ ವಿಚಾರಣೆಗೆ ಒಳಪಡಿಸಲು ಇಡಿಗೆ ಸೂಚಿಸುವಂತೆ ಹೈಕೋರ್ಟಿಗೆ ಮನವಿ ಮಾಡಿದರು.

ಈ ಸಂಬಂಧ ಇಂದು ಕೂಡ ವಾದ ಪ್ರತಿ-ವಾದ ಮುಂದುವರಿಯಲಿದ್ದು, ಬಳಿಕ ಮಧ್ಯಂತರ ತೀರ್ಪು ಬರುವ ಸಾಧ್ಯತೆಗಳಿವೆ. ಇಡಿ ವಿಚಾರಣೆಗೆ ಹೈಕೋರ್ಟ್ ಬ್ರೇಕ್ ಹಾಕುತ್ತಾ ಅಥವಾ ವಯಸ್ಸಿನ ಕಾರಣಗಳಿಂದ ಬೆಂಗಳೂರಿನಲ್ಲಿಯೇ ವಿಚಾರಣೆಗೆ ನಿರ್ದೇಶನ ಕೊಡುತ್ತಾ ಅನ್ನೋದನ್ನು ಕಾದು ನೋಡಬೇಕು.

Comments

Leave a Reply

Your email address will not be published. Required fields are marked *