ಕುದ್ರೋಳಿಯಲ್ಲಿ ಮನಸ್ಸಿನ ನೋವನ್ನು ರಾಹುಲ್ ಬಳಿ ತೋಡಿಕೊಂಡ ಪೂಜಾರಿ!

ಮಂಗಳೂರು: ನಮಗೆ ಗೌರವ ಕೊಡದಿದ್ದರೂ ಪರವಾಗಿಲ್ಲ, ಪಕ್ಷ ಉಳಿಸಲಿ ಸಾಕು ಎಂದು ದಕ್ಷಿಣ ಕನ್ನಡದ ಹಿರಿಯ ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ  ಅವರು ರಾಹುಲ್ ಗಾಂಧಿ ಬಳಿ ಮನಸ್ಸಿನ ನೋವನ್ನು ತೋಡಿಕೊಂಡಿದ್ದಾರೆ.

ಹೌದು. ಮಂಗಳವಾರ ರಾತ್ರಿ ರಾಹುಲ್ ಗಾಂಧಿಯವರು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಭೇಟಿ ನೀಡಿದರು. ರಾಜ್ಯದಲ್ಲಿ ನನ್ನನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ. ರಾಜ್ಯದ ಬಹುತೇಕ ಎಲ್ಲಾ ಹಿರಿಯ ನಾಯಕರದು ಇದೇ ಸ್ಥಿತಿಯಾಗಿದೆ ಎಂದು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿಗಳ ಈ ವರ್ತನೆ ನೋಡಿದರೆ ಪಕ್ಷಕ್ಕೆ ಮುಂದೆ ಆಪಾಯ ಇದೆ. ಈ ಕಾರಣಕ್ಕೆ ನಾನು ನಿಮ್ಮ ಪ್ರವಾಸದಲ್ಲಿ ಭಾಗಿಯಾಗಿಲ್ಲ. ಈ ಬಾರಿ ರಾಜ್ಯದಲ್ಲಿ ಪಕ್ಷ ಅಧಿಕಾರ ಹಿಡಿಯುವುದು ಕಷ್ಟ ಇದೆ. ಸಿದ್ದರಾಮಯ್ಯ ಈ ಬಾರಿ ನಾವೇ ಗೆಲ್ಲುತ್ತೇವೆ ಎನ್ನುವ ಅತಿಯಾದ ಆತ್ಮವಿಶ್ವಾಸದಲ್ಲಿದ್ದಾರೆ. ಪಕ್ಷ ಉಳಿಯುವಂತೆ ಮಾಡುವುದು ನಿಮ್ಮ ಜವಾಬ್ದಾರಿ ಎಂದು ಪೂಜಾರಿ ಹೇಳಿದ್ದಾರೆ.

ಗರ್ಭಗುಡಿ ಸಮೀಪ ಹಾಗೂ ದೇವಸ್ಥಾನದ ಹೊರಭಾಗದ ಮಂಟಪದ ಬಳಿ ನೋವು ತೋಡಿಕೊಂಡ ಪೂಜಾರಿ, ಅಧಿಕಾರ ಹಿಡಿಯುವಷ್ಟು ಸ್ಥಾನ ಬರುವುದಿಲ್ಲ ಎಂದು ನೇರವಾಗಿ ಹೇಳಿದ್ದಾರೆ. ಮನಸ್ಸಿನ ನೋವು ಹೊರಹಾಕಿದ ನಂತರ ಜನಾರ್ದನ ಪೂಜಾರಿ ಕಣ್ಣೀರು ಹಾಕಿದ್ದಾರೆ. ಈ ವೇಳೆ ಪೂಜಾರಿ ಅವರನ್ನು ತಬ್ಬಿಕೊಂಡು ರಾಹುಲ್ ಗಾಂಧಿ ಸಂತೈಸಿದ್ದಾರೆ.

ಜನಾರ್ದನ ಪೂಜಾರಿ ಈ ಹಿಂದೆ ರಾಜ್ಯ ಸರ್ಕಾರದ ವಿರುದ್ಧ ಬಹಿರಂಗ ಹೇಳಿಕೆ ನೀಡಿದ್ದರಿಂದ ಸಿಎಂ ಅಸಮಾಧಾನವನ್ನು ಹೊರ ಹಾಕಿದ್ದರು. ಆದರೆ ನಿನ್ನೆ ಕುದ್ರೋಳಿಗೆ ರಾಹುಲ್ ಜೊತೆ ಸಿದ್ದರಾಮಯ್ಯ ಆಗಮಿಸಿದ್ದರು. ರಾಹುಲ್ ಮುಂದೆ ದ್ವೇಷ ಮರೆಮಾಚಲು ಸಿದ್ದರಾಮಯ್ಯ ಭೇಟಿ ನೀಡಿದ್ದಾರೆ ಎನ್ನುವ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಹರಿದಾಡುತ್ತಿದೆ.  ಇದನ್ನೂ ಓದಿ: ಕರ್ನಾಟಕದಲ್ಲಿ ಕಾಂಗ್ರೆಸ್ ಎಷ್ಟು ಸ್ಥಾನ ಗೆಲ್ಲುತ್ತೆ: ರಾಹುಲ್ ಪ್ರಶ್ನೆಗೆ ಒಬ್ಬೊಬ್ಬರದ್ದು ಒಂದೊಂದು ಲೆಕ್ಕ!

 

Comments

Leave a Reply

Your email address will not be published. Required fields are marked *