ಕಾಂಗ್ರೆಸ್‌ 4ನೇ ಪಟ್ಟಿ ರಿಲೀಸ್‌ – ಸಿ.ಟಿ. ರವಿ ವಿರುದ್ಧ ಮಾಜಿ ಆಪ್ತನಿಗೆ ಟಿಕೆಟ್‌

– ಶೆಟ್ಟರ್‌ಗೆ ಹು-ಧಾ ಸೆಂಟ್ರಲ್‌ ಟಿಕೆಟ್‌ ಅಧಿಕೃತ ಘೋಷಣೆ
– ಸಿಎಂ ವಿರುದ್ಧ ಮಹಮ್ಮದ್‌ ಯೂಸುಫ್‌ ಸ್ಪರ್ಧೆ
– ಹರಿಹರದಲ್ಲಿ ಹಾಲಿ ಶಾಸಕನಿಗಿಲ್ಲ ಟಿಕೆಟ್‌

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ 4ನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಏಳು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ.

ನಿನ್ನೆಯಷ್ಟೇ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದ್ದ ಜಗದೀಶ್‌ ಶೆಟ್ಟರ್‌ಗೆ ಪಕ್ಷ ಸೇರಿದ ಕೆಲವೇ ಗಂಟೆಗಳಲ್ಲಿ ಬಿ ಫಾರಂ ನೀಡಲಾಗಿತ್ತು. ಅದರಂತೆ 4ನೇ ಪಟ್ಟಿಯಲ್ಲಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ ಕ್ಷೇತ್ರದಿಂದ ಶೆಟ್ಟರ್‌ಗೆ ಟಿಕೆಟ್‌ ನೀಡಿದೆ. ಇದನ್ನೂ ಓದಿ: ಮೋದಿ ಬೆನ್ನಮೇಲೆ ಗುದ್ದಿದ ಭಾರ ನನ್ನ ಮೇಲಿದೆ; ಶಾಸಕನಾಗುವುದಕ್ಕಿಂತ ಪ್ರಧಾನಿ ಪ್ರೀತಿ ಮುಖ್ಯ – ರಾಮದಾಸ್

ಲಿಂಗಸೂಗುರು ಕ್ಷೇತ್ರದಿಂದ ಹಾಲಿ ಶಾಸಕ ದುರ್ಗಪ್ಪ ಎಸ್ ಹುಲಗೇರಿ, ಚಿಕ್ಕಮಗಳೂರು – ಹೆಚ್.ಡಿ ತಮ್ಮಯ್ಯ, ಶ್ರವಣಬೆಳಗೊಳ – ಎಂ.ಎ ಗೋಪಾಲಸ್ವಾಮಿ, ಹರಿಹರ – ನಂದಗವಿ ಶ್ರೀನಿವಾಸ್, ಶಿಗ್ಗಾಂವಿ – ಯೂಸುಫ್ ಸವಣೂರು, ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದಲ್ಲಿ ದೀಪಕ್‌ ಚಿಂಚೋರ್‌ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದೆ. ಅಲ್ಲದೇ ಇನ್ನೂ 8 ಕ್ಷೇತ್ರಗಳ ಅಭ್ಯರ್ಥಿಗಳ ಘೋಷಣೆ  ಬಾಕಿ ಉಳಿಸಿಕೊಂಡಿದೆ.

ಬಾಕಿ ಉಳಿದಿರುವ ಕ್ಷೇತ್ರಗಳು
ಶಿಡ್ಲಘಟ್ಟ, ಮುಳಬಾಗಿಲು, ಮಂಗಳೂರು ಉತ್ತರ, ಪುಲಕೇಶಿನಗರ, ರಾಯಚೂರು, ಅರಕಲಗೂಡು, ಸಿವಿ ರಾಮನ್ ನಗರ.

ಹರಿಹರದ ಹಾಲಿ ಶಾಸಕ ರಾಮಪ್ಪಗೆ ಟಿಕೆಟ್‌ ಮಿಸ್‌ ಆಗಿದೆ. ಬದಲಾಗಿ ನಂದಗವಿ ಶ್ರೀನಿವಾಸ್‌ಗೆ ಕಾಂಗ್ರೆಸ್‌ ಮಣೆ ಹಾಕಿದೆ. ಅಲ್ಲದೇ ಚಿಕ್ಕಮಗಳೂರಿನಲ್ಲಿ ಸಿ.ಟಿ.ರವಿ ವಿರುದ್ಧ ಮಾಜಿ ಆಪ್ತ ತಮ್ಮಯ್ಯಗೆ ಟಿಕೆಟ್‌ ನೀಡಿದೆ. ತಮ್ಮಯ್ಯ ಅವರು ಸಿ.ಟಿ.ರವಿ ಅವರಿಗೆ ಆಪ್ತರಾಗಿದ್ದರು. ಈಚೆಗಷ್ಟೇ ತಮ್ಮಯ್ಯ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದ್ದರು. ಇದನ್ನೂ ಓದಿ: ಪ್ರಚಾರಕ್ಕೆ ತೆರಳಿದ್ದ ಸೋಮಣ್ಣ, ಪ್ರತಾಪ್ ಸಿಂಹಗೆ ಗ್ರಾಮಸ್ಥರಿಂದ ಫುಲ್ ಕ್ಲಾಸ್

ಇನ್ನೂ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಶಿಗ್ಗಾಂವಿಯಲ್ಲಿ ಕಾಂಗ್ರೆಸ್‌ನಿಂದ ಮಹಮ್ಮದ್‌ ಯೂಸುಫ್‌ ಕಣಕ್ಕಿಳಿಯಲಿದ್ದಾರೆ.