ಮಂಡ್ಯದಲ್ಲಿಂದು ಕಾಂಗ್ರೆಸ್, ಬಿಜೆಪಿ-ಜೆಡಿಎಸ್ ಸಮಾವೇಶ

ಮಂಡ್ಯ: ಸಕ್ಕರೆ ನಾಡು ಮಂಡ್ಯ ಲೋಕಸಭಾ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಮಣಿಸಲು ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ.

‘ಕೈ’ ಅಭ್ಯರ್ಥಿ ವೆಂಕಟರಮಣೇಗೌಡ ಉರುಫ್ ಸ್ಟಾರ್ ಚಂದ್ರು ಗೆಲ್ಲಿಸುವ ಮೂಲಕ‌ ಹೆಚ್‌ಡಿಕೆಯನ್ನು ಸೋಲಿಸಬೇಕೆಂದು ನಾಯಕರು ಮುಂದಾಗಿದ್ದಾರೆ. ಈಗಾಗಲೇ ಮಂಡ್ಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಎರಡು ಸುತ್ತು ಪ್ರಚಾರ ನಡೆಸಿರುವ ಅಭ್ಯರ್ಥಿ ಹಾಗೂ ಸ್ಥಳೀಯ ನಾಯಕರು ಎರಡು ಸುತ್ತು ಪ್ರಚಾರ ಮಾಡಿದ್ದಾರೆ.

ಇಂದು ಸ್ಟಾರ್ ಚಂದ್ರು ಪರ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರಚಾರ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಮೊದಲಿಗೆ ಕೆ.ಆರ್.ನಗರ, ನಂತರ ಕೆ‌‌.ಆರ್.ಪೇಟೆ‌ ಹಾಗೂ ಅಂತಿಮವಾಗಿ ನಾಗಮಂಗಲದಲ್ಲಿ ಪ್ರಚಾರ ಸಭೆ ಜರುಗಲಿದೆ. ಪ್ರತಿ ಸಮಾವೇಶದಲ್ಲೂ‌ 50 ಸಾವಿರ ಜನರನ್ನು ಸೇರಿಸುವ ನೀರಿಕ್ಷೆಯಲ್ಲಿ ಕೈ ನಾಯಕರು ಇದ್ದಾರೆ. ಈ ವೇಳೆ ಸಿದ್ದರಾಮಯ್ಯ, ಡಿಕೆಶಿ ಹಾಗೂ ಚಲುವರಾಯಸ್ವಾಮಿ, ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸುವ ಮೂಲಕ ಸ್ಟಾರ್ ಚಂದ್ರು ಪರ ಮತಯಾಚನೆ ಮಾಡಲಿದ್ದಾರೆ.

ಒಂದು ಕಡೆ ಕಾಂಗ್ರೆಸ್ ನಾಯಕರು ಮಂಡ್ಯ ಲೋಕಸಭಾ ಕ್ಷೇತ್ರದ ಮೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರಚಾರ ಮಾಡಿದ್ರೆ ಬಿಜೆಪಿ-ಜೆಡಿಎಸ್ ಸಹ ಪ್ರಚಾರ ಸಭೆ ನಡೆಸಲು ಮುಂದಾಗಿದೆ. ತಂದೆ ಕುಮಾರಸ್ವಾಮಿ ಪರ ನಿಖಿಲ್ ಇಂದು ಬೆಳಗ್ಗೆಯಿಂದಲೇ ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ಮಾಡಲಿದ್ದಾರೆ. ಪಾಂಡವಪುರದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಸಮಾವೇಶ ಜರುಗಿಲಿದೆ. ಈ ವೇಳೆ ಅಭ್ಯರ್ಥಿ ಹೆಚ್.ಡಿ.ಕುಮಾರಸ್ವಾಮಿ, ಜೆಡಿಎಸ್‌-ಬಿಜೆಪಿ ನಾಯಕರು ಭಾಗಿಯಾಗಲಿದ್ದಾರೆ. ಇದಲ್ಲದೇ ಮಾಜಿ ಸಿಎಂ ಯಡಿಯೂರಪ್ಪ ಸಹ ಈ ವೇಳೆ ಭಾಗಿಯಾಗುವ ಸಾಧ್ಯತೆ ಇದೆ.

ಒಂದು ಕಡೆ ಹೆಚ್‌ಡಿಕೆ ಮಣಿಸಲು ಕೈ ನಾಯಕರು ರಣತಂತ್ರ ರೂಪಿಸುತ್ತಿದ್ದರೆ, ಇನ್ನೊಂದೆಡೆ ಹೆಚ್‌ಡಿಕೆ ಗೆಲುವಿಗೆ ಬಿಜೆಪಿ-ಜೆಡಿಎಸ್ ನಾಯಕರು ಮಂಡ್ಯದಲ್ಲಿ‌ ತೊಡೆ ತಟ್ಟಿದ್ದಾರೆ. ಅಂತಿಮವಾಗಿ ಮತದಾರ ಪ್ರಭು ಯಾರ ಕಡೆ ವಾಲುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.