ಸ್ವಚ್ಛಗೊಳಿಸುವುದಕ್ಕೂ ಮುನ್ನವೇ ಬೀಚ್ ಕ್ಲೀನ್ ಮಾಡಲಾಗಿತ್ತು, ಮೋದಿ ನಾಟಕವಾಡಿದ್ದಾರೆ- ಕಾಂಗ್ರೆಸ್

ಚೆನ್ನೈ: ವಿದೇಶಿ ಗಣ್ಯರು ಆಗಮಿಸುತ್ತಿದ್ದ ಹಿನ್ನೆಲೆ ಮಾಮಲ್ಲಾಪುರಂ ಬೀಚ್‍ನ್ನು ಆಗಲೇ ಸ್ವಚ್ಛಗೊಳಿಸಲಾಗಿತ್ತು. ಆದರೆ ಶನಿವಾರ ಪ್ರಧಾನಿ ನರೇಂದ್ರ ಮೋದಿ ಬೀಚ್‍ನಲ್ಲಿ ಪ್ಲಾಸ್ಟಿಕ್ ಸ್ವಚ್ಛಗೊಳಿಸುವ ನಾಟಕವಾಡಿದ್ದಾರೆ ಎಂದು ತಮಿಳುನಾಡು ಕಾಂಗ್ರೆಸ್ ಘಟಕ ಆಕ್ರೋಶ ವ್ಯಕ್ತಪಡಿಸಿದೆ.

ಶುಕ್ರವಾರ ಮತ್ತು ಶನಿವಾರ ಚೀನಾದ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಅವರ ಎರಡು ದಿನಗಳ ಅನೌಪಚಾರಿಕ ಸಭೆಯಲ್ಲಿ ಪಾಲ್ಗೊಳ್ಳಲು ಮೋದಿ ಪ್ರಾಚೀನ ಬಂದರು ಮಾಮಲ್ಲಾಪುರಂಗೆ ತೆರಳಿದ್ದರು.

ಶನಿವಾರ ಬೆಳಗ್ಗೆ ಪಿಎಂ ಮೋದಿ ವಾಕಿಂಗ್ ಮಾಡಲು ಮಾಮಲ್ಲಾಪುರಂ ಬೀಚ್‍ಗೆ ತೆರಳಿದ್ದರು. ಆಗ ಮೋದಿ ಸರಳವಾಗಿ ಟೀ ಶರ್ಟ್ ಮತ್ತು ಕಪ್ಪು ಪ್ಯಾಂಟ್ ಧರಿಸಿ, ಬೀಚ್ ಸ್ವಚ್ಛಗೊಳಿಸುವ ಕಾರ್ಯ ನಡೆಸಿದ್ದರು. ಸುಮಾರು ಅರ್ಧ ಗಂಟೆಗಳ ಕಾಲ ಪ್ರಧಾನಿ ನರೇಂದ್ರ ಮೋದಿಯವರು ಬೀಚ್‍ನಲ್ಲಿದ್ದ ಪ್ಲಾಸ್ಟಿಕ್ ಕಸ ಮತ್ತು ಒಂದು ಬಾರಿ ಬಳಸುವ ನೀರಿನ ಬಾಟಲಿಗಳನ್ನು ಸಂಗ್ರಹಿಸಿದ್ದರು. ಬೀಚ್‍ನಿಂದ ಪ್ಲಾಸ್ಟಿಕ್ ಕಸ, ನೀರಿನ ಬಾಟಲಿಗಳು ಮತ್ತು ಇತರ ತ್ಯಾಜ್ಯವನ್ನು ಸಂಗ್ರಹಿಸಿ ಅಲ್ಲಿನ ಹೋಟೆಲ್ ಸಿಬ್ಬಂದಿಗೆ ನೀಡಿದ್ದರು.

ತಾಜ್ ಫಿಶರ್ಮನ್ಸ್ ಕೋವ್ ಮತ್ತು ಸ್ಪಾ ಹೊರಗೆ ಬೀಚ್ ಬಳಿ ಬರಿಗಾಲಲ್ಲಿ ನಡೆದು, ಪ್ಲಾಸ್ಟಿಕ್ ಸಂಗ್ರಹಿಸುತ್ತಿದ್ದ ವಿಡಿಯೋವನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅವರ ಸರಳತೆಯನ್ನು ಕಂಡು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು.

ವಿಡಿಯೋದಲ್ಲಿ ಮೋದಿ ಅವರು, ಸಮುದ್ರದ ಮರಳಿನ ಮೇಲೆ ಬಿದ್ದಿದ್ದ ಪ್ಲಾಸ್ಟಿಕ್ ಬಾಟಲಿ, ಚೀಲ ಹಾಗೂ ಚಪ್ಪಲಿಗಳನ್ನು ತೆಗೆದು ದೊಡ್ಡ ಪ್ಲಾಸ್ಟಿಕ್ ಚೀಲದಲ್ಲಿ ಸಂಗ್ರಹಿಸುತ್ತಿರುವುದನ್ನು ಕಾಣಬಹುದಾಗಿದೆ. ಪ್ರಧಾನಿಗಳ ಈ ವಿಡಿಯೋವನ್ನು ನಿನ್ನೆ ಸುಮಾರು 60 ಸಾವಿರ ಮಂದಿ ಲೈಕ್ ಮಾಡಿದ್ದು, 18 ಸಾವಿರಕ್ಕೂ ಹೆಚ್ಚು ಮಂದಿ ಟ್ವಿಟನ್ನು ರಿಟ್ವೀಟ್ ಮಾಡಿದ್ದರು.

Comments

Leave a Reply

Your email address will not be published. Required fields are marked *