ಟೆಲಿಕಾಂ ಕಂಪನಿಗಳು ಈಸ್ಟ್ ಇಂಡಿಯಾ ಕಂಪನಿ ರೀತಿ ವರ್ತಿಸುತ್ತಿವೆ- ಕಾಂಗ್ರೆಸ್

– ದರ ಏರಿಕೆಯ ಮೂಲಕ ದರೋಡೆಗೆ ನಿಂತಿವೆ
– ಮೊದಲು ಡೇಟಾ ದರ ಕಡಿಮೆ ಮಾಡಿದ್ಯಾಕೆ?

ನವದೆಹಲಿ: ಟೆಲಿಕಾಂ ಕಂಪನಿಗಳ ದರ ಏರಿಕೆ ಸಮರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದ್ದು, ಇದಕ್ಕೆ ಕೇಂದ್ರ ಸರ್ಕಾರವೇ ಕಾರಣ ಎಂದು ಆರೋಪಿಸಿದೆ.

ಈ ಕುರಿತು ಕಾಂಗ್ರೆಸ್ ಸಂಸದ ಪ್ರತಾಪ್ ಸಿಂಗ್ ಬಜ್ವಾ ಪ್ರತಿಕ್ರಿಯಿಸಿದ್ದು, ಟೆಲಿಕಾಂ ಕಂಪನಿಗಳು ಟಾರಿಫ್ ಪ್ಲಾನ್‍ಗಳ ದರವನ್ನು ಹೆಚ್ಚಿಸುವ ಮೂಲಕ ಗ್ರಾಹಕರನ್ನು ಸುಲಿಗೆ ಮಾಡುತ್ತಿವೆ. ಈ ಮೂಲಕ ಈಸ್ಟ್ ಇಂಡಿಯಾ ಕಂಪನಿ ರೀತಿ ವರ್ತಿಸುತ್ತಿವೆ. ಇದನ್ನು ಕೇಂದ್ರ ಸರ್ಕಾರ ನಿಯಂತ್ರಿಸಬೇಕು ಎಂದು ಒತ್ತಾಯಿಸಿದರು.

ವೋಡಾಫೋನ್-ಐಡಿಯಾ, ಭಾರ್ತಿ ಏರ್‍ಟೆಲ್ ಡಿಸೆಂಬರ್ 3 ರಿಂದ ಹಾಗೂ ರಿಲಾಯನ್ಸ್ ಜಿಯೋ ಇನ್ಫೋಕಾಮ್ ಡಿಸೆಂಬರ್ 6ರಿಂದ ಕರೆ ಹಾಗೂ ಡೇಟಾ ದರವನ್ನು ಶೇ.15ರಿಂದ 47 ರಷ್ಟು ಹೆಚ್ಚಳ ಮಾಡುವ ಕುರಿತು ತಿಳಿಸಿವೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

ಇದ್ದಕ್ಕಿದ್ದಂತೆ ಟಾರಿಫ್ ದರ ಹೆಚ್ಚಿಸುವುದು ಸುಲಿಗೆಗಿಂತ ಕಡಿಮೆಯೇನಲ್ಲ. ಮೊದಲು ಕರೆ ಹಾಗೂ ಡೇಟಾ ದರವನ್ನು ಕಡಿಮೆ ಮಾಡಿದ್ದರು. ಇದೀಗ ಅವರ ಜೇಬಿಗೆ ಹಣ ಬರುತ್ತಿದ್ದಂತೆ ದರ ಹೆಚ್ಚಿಸುವ ಮೂಲಕ ಸುಲಿಗೆ ಮಾಡಲು ಮುಂದಾಗಿದ್ದಾರೆ ಎಂದು ಬಿಜ್ವಾ ಆರೋಪಿಸಿದ್ದಾರೆ.

ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್ ಸಹ ಆಕ್ರೋಶ ವ್ಯಕ್ತಪಡಿಸಿದ್ದು, ಟೆಲಿಕಾಂ ವಲಯ ಏಕೆ 8 ಲಕ್ಷ ಕೋಟಿ ರೂ. ಸಾಲ ಹೊಂದಿದೆ. ಟೆಲಿಕಾಂ ಕಂಪನಿಗಳ ಈ ನಿರ್ಧಾರಕ್ಕೆ ಸರ್ಕಾರವೇ ಕಾರಣ. ರಿಲಾಯನ್ಸ್‍ನ ಜಿಯೋ ಕಾಲಿಟ್ಟ ನಂತರ ಈ ಬೆಲೆ ವಾರ್ ಶುರುವಾಗಿದೆ ಎಂದರು.

ಐಡಿಯಾ ವೊಡಾಫೋನ್ ಮತ್ತು ಏರ್‍ಟೆಲ್ ಕಂಪನಿಗಳು ಡಿ.3 ರಿಂದ ಹಾಗೂ ರಿಲಾಯನ್ಸ್ ಜಿಯೋ ಡಿಸೆಂಬರ್ 6ರಿಂದ ಮೊಬೈಲ್ ಕರೆ ಮತ್ತು ಡೇಟಾ ದರಗಳನ್ನು ಹೆಚ್ಚಿಸುವುದಾಗಿ ತಿಳಿಸಿವೆ. ಈ ಹಿಂದಿನ ದರಗಳಿಗೆ ಹೋಲಿಸಿದರೆ ಶೇ.42 ರಷ್ಟು ದರ ಹೆಚ್ಚಳವಾಗಲಿದೆ.

ಮಾರುಕಟ್ಟೆಯಲ್ಲಿ ಜಿಯೋಗೆ ಸ್ಪರ್ಧೆ ನೀಡಲು ಮೂರು ವರ್ಷಗಳಿಂದ ದರವನ್ನು ಇಳಿಸಿದ್ದ ಟೆಲಿಕಾಂ ಕಂಪನಿಗಳು ಈಗ ದರ ಏರಿಸುತ್ತಿವೆ. ವೊಡಾಫೋನ್ ಐಡಿಯಾ, ಏರ್‍ಟೆಲ್ ಕಳೆದ ವಾರ ಪ್ರತ್ಯೇಕ ಹೇಳಿಕೆಯನ್ನು ಬಿಡುಗಡೆ ಮಾಡಿ ಕಂಪನಿಗೆ ಆಗುತ್ತಿರುವ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಬೆಲೆ ಏರಿಕೆ ಮಾಡಲಾಗುವುದು ಎಂದು ಹೇಳಿಕೊಂಡಿತ್ತು.

ಟೆಲಿಕಾಂ ಕ್ಷೇತ್ರದಲ್ಲಿ ತಂತ್ರಜ್ಞಾನ ಬದಲಾವಣೆ ಆಗುತ್ತಲೇ ಇರುತ್ತದೆ. ಹೀಗಾಗಿ ಹೊಸತನಕ್ಕೆ ತೆರೆಯಬೇಕಾದರೆ ಕೋಟ್ಯಂತರ ರೂ. ಹಣ ಹೂಡಬೇಕಾಗುತ್ತದೆ. ನಷ್ಟದಲ್ಲಿದ್ದುಕೊಂಡು ಹೂಡಿಕೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ದರ ಏರಿಕೆ ಅನಿವಾರ್ಯ ಎಂದು ಕಂಪನಿಗಳು ತಮ್ಮ ನಿರ್ಧಾರವನ್ನು ಸ್ಪಷ್ಟಪಡಿಸಿದ್ದವು.

Comments

Leave a Reply

Your email address will not be published. Required fields are marked *