ಪ್ರಜಾಪ್ರಭುತ್ವದ ವಿರೋಧಿ ನಿರ್ಧಾರ – ಪ್ರಮಾಣವಚನಕ್ಕೆ ಕೈ, ದಳ ಆಕ್ಷೇಪ

ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣವಚನ ಸ್ವೀಕಾರ ಮಾಡಲು ಬಿ.ಎಸ್ ಯಡಿಯೂರಪ್ಪ ಅವರು ಸಜ್ಜಾಗಿದ್ದು, ಈ ಮಧ್ಯೆ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷ ಆಕ್ಷೇಪ ವ್ಯಕ್ತಪಡಿಸಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಜೆಡಿಎಸ್, ವಿಧಾನಸಭೆಯ ಸಂಖ್ಯಾಬಲ 222, ಬಹುಮತಕ್ಕೆ ಬೇಕಾಗಿರುವ ಸಂಖ್ಯಾಬಲ 112. ಆದರೆ ಬಿಎಸ್ ವೈ ಅವರು ನನಗೆ 105 ಶಾಸಕರ ಬೆಂಬಲವಿದೆ ಎಂದು ಸರ್ಕಾರ ರಚನಗೆ ಹಕ್ಕು ಮಂಡಿಸಿದ್ದು ಇದಕ್ಕೆ ರಾಜ್ಯಪಾಲರು ಬಹುಮತದ ಸರ್ಕಾರ ರಚನೆಯ ಕುರಿತು ಯಾವುದೇ ಅನುಮಾನ ವ್ಯಕ್ತಪಡಿಸದೇ ಒಂದೇ ನಿಮಿಷದಲ್ಲಿ ಅನುಮತಿ ನೀಡಿದ್ದು ಪ್ರಜಾಪ್ರಭುತ್ವದ ವಿರೋಧಿ ನಿರ್ಧಾರ ಎಂದು ಬಿಎಸ್‍ವೈ ಅವರನ್ನು ಟ್ಯಾಗ್ ಮಾಡುವ ಮೂಲಕ ಕಿಡಿಕಾರಿದೆ.

ಕಾಂಗ್ರೆಸ್ ಕೂಡ ಟ್ವೀಟ್ ಮಾಡಿದ್ದು, ಇವತ್ತು ಬಿಜೆಪಿಗೆ ಸಂಖ್ಯಾಬಲ ಇಲ್ಲದ ಕಾರಣ ಯಾವುದೇ ಕಾರಣಕ್ಕೂ ಹಕ್ಕು ಮಂಡನೆಯಾಗಲಿ ಅಥವಾ ಪ್ರಮಾಣ ವಚನ ಸ್ವೀಕರಿಸಲು ಸಾಧ್ಯವೇ ಇಲ್ಲ. ಬಿಜೆಪಿ ಹಾಗೂ ಬಿಎಸ್‍ವೈ ಅವರಿಗೆ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೂಲಭೂತ ಹಾಗೂ ಸಾಮಾನ್ಯ ಜ್ಞಾನ ಹೊಂದುವುದು ಅವಶ್ಯಕ ಎಂದು ಬರೆದುಕೊಂಡು ಕರ್ನಾಟಕ ಬಿಜೆಪಿ ಹಾಗೂ ಯಡಿಯೂರಪ್ಪ ಅವರಿಗೆ ಟ್ಯಾಗ್ ಮಾಡಿದೆ.

ಇತ್ತ ನಿನ್ನೆಯಷ್ಟೇ ಸ್ಪೀಕರ್ ರಮೇಶ್ ಕುಮಾರ್ ಅವರು ರಮೇಶ್ ಜಾರಕಿಹೊಳಿ, ಮಹೇಶ್ ಕುಮುಟಳ್ಳಿ ಹಾಗೂ ಆರ್ ಶಂಕರ್ ಅನರ್ಹಗೊಳಿಸಿದ್ದರು. ಈ ಮೂಲಕ ಉಳಿದ ಅತೃಪ್ತರಿಗೆ ಶಾಕ್ ನೀಡಿದ್ದರು. ಈ ಮೂವರನ್ನು ಅನರ್ಹಗೊಳಿಸುವ ಮೂಲಕ ಉಳಿದ ಶಾಸಕರು ಇದರಿಂದ ಭಯಗೊಂಡು ಮತ್ತೆ ತಮ್ಮ ಸ್ಥಾನಕ್ಕೆ ಹಿಂದಿರುಗುತ್ತಾರೆ. ಇದರಿಂದ ಮತ್ತೆ ತಮ್ಮ ಸಂಖ್ಯಾಬಲ ಏರಿಕೆಯಾಗುತ್ತದೆ ಎಂಬ ನಿರೀಕ್ಷೆಯಲ್ಲಿ ದೋಸ್ತಿಗಳಿದ್ದರು. ಅಲ್ಲದೆ ಈ ಮೂಲಕ ಮತ್ತೆ ಅಧಿಕಾರವೇರುವ ಹುಮ್ಮಸ್ಸಿನಲ್ಲಿದ್ದರು.

ಇದೀಗ ದಿಢೀರ್ ರಾಜಕೀಯ ಬೆಳವಣಿಗೆಯಾಗಿದ್ದು, ಇಂದು ಸಂಜೆಯೇ ಮುಖ್ಯಮಂತ್ರಿಯಾಗಿ ಬಿಎಸ್ ವೈ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಈ ವಿಚಾರ ಇದೀಗ ದೋಸ್ತಿಗಳಿಗೆ ಕಗ್ಗಂಟಾಗಿದೆ.

Comments

Leave a Reply

Your email address will not be published. Required fields are marked *