ಶಾಸಕ ವರ್ತೂರ್ ಪ್ರಕಾಶ್ ರನ್ನು ಮಣಿಸಲು ಪಣ- ಕಾಂಗ್ರೆಸ್-ಜೆಡಿಎಸ್ ನಿಂದ ಸಿದ್ಧವಾಗಿದೆ `ಟಾರ್ಗೆಟ್ ವರ್ತೂರು’ ಟೀಂ

ಕೋಲಾರ: ಚುನಾವಣೆಗೆ ದಿನಗಣನೆ ಆರಂಭವಾಗಿದ್ರೂ, ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಆಯ್ಕೆ ಗೊಂದಲಕ್ಕೆ ಮಾತ್ರ ತೆರೆಬಿದ್ದಿಲ್ಲ. ಈ ಮಧ್ಯೆ ಹಾಲಿ ಶಾಸಕರನ್ನು ಸೋಲಿಸಲು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಅತೃಪ್ತರ ತಂಡವೊಂದು ಸಿದ್ಧವಾಗಿದೆ. ಟಾರ್ಗೆಟ್ ವರ್ತೂರು ಅನ್ನೋ ಹೆಸರಲ್ಲಿ ಟೀಂ ಒಂದು ಸಖತ್ ಪ್ಲಾನ್ ಮಾಡುತ್ತಿದೆ.

ಕೋಲಾರ ವಿಧಾನಸಭಾ ಕ್ಷೇತ್ರ ರಾಜ್ಯಮಟ್ಟದಲ್ಲಿ ಸದ್ದು ಮಾಡುತ್ತಿರುವ ಕ್ಷೇತ್ರ, ಮೂರು ಪಕ್ಷಗಳಲ್ಲಿ ಟಿಕೆಟ್ ಹಂಚಿಕೆ ವಿಚಾರದಿಂದ ಹಿಡಿದು ಬಂಡಾಯದವರೆಗೆ ಕ್ಷೇತ್ರದಲ್ಲಿ ಇನ್ನು ಭಿನ್ನಮತ ಶಮನವಾಗಿಲ್ಲ. ಈ ನಡುವೆ ಕೋಲಾರ ಕ್ಷೇತ್ರದಲ್ಲಿ ಹೊಸದೊಂದು ಆನ್ ಲೈನ್ ಟೀಂ ಸಿದ್ಧವಾಗುತ್ತಿದೆ. ಆ ಟೀಂನ ಅಜೆಂಡಾ ಒಂದೇ ಕೋಲಾರದ ಹಾಲಿ ಶಾಸಕ ವರ್ತೂರ್ ಪ್ರಕಾಶ್ ರನ್ನು ಕೋಲಾರ ಕ್ಷೇತ್ರದಿಂದ ಸೋಲಿಸಬೇಕು ಅನ್ನೋದೆ ಆಗಿದೆ.

ಇದೇ ಉದ್ದೇಶದೊಂದಿಗೆ ಕಾಂಗ್ರೆಸ್ ಪಕ್ಷದ ಅತೃಪ್ತರು ಹಾಗೂ ಜೆಡಿಎಸ್ ಪಕ್ಷದ ಅತೃಪ್ತರು, ಮಾಜಿ ಸಚಿವ ಕೆ.ಶ್ರೀನಿವಾಸಗೌಡ ಬೆಂಬಲಿಗರು ಸೇರಿದಂತೆ ಕೋಲಾರ ಸಂಸದ ಕೆ.ಹೆಚ್.ಮುನಿಯಪ್ಪ ವಿರೋಧಿ ಬಣ ಒಗ್ಗಟ್ಟಾಗಿ ಒಬ್ಬ ಅಭ್ಯರ್ಥಿಯನ್ನ ಕಣಕ್ಕಿಳಿಸಲು ಪ್ಲಾನ್ ಮಾಡಲಾಗುತ್ತಿದೆ. ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ಘೋಷಣೆ ಮಾಡಿದ ಬೆನ್ನಲ್ಲೇ ಈ ಎಲ್ಲಾ ಅತೃಪ್ತರು ಒಂದಾಗಿದ್ದು, ಪಕ್ಷಾತೀತವಾಗಿ ಒಂದಾಗಿ ಈ ಚುನಾವಣೆಯಲ್ಲಿ ವರ್ತೂರ್ ಪ್ರಕಾಶ್‍ರನ್ನು ಸೋಲಿಸಲು ಮುಂದಾಗಿದ್ದಾರೆ. ಆದರೆ ಜೆಡಿಎಸ್ ಪಕ್ಷದಿಂದ ಅಭ್ಯರ್ಥಿ ಘೋಷಣೆಯಾಗದ ಹಿನ್ನೆಲೆ ಜೆಡಿಎಸ್‍ಗೆ ಬೆಂಬಲಿಸಿ ಚುನಾವಣೆ ಎದುರಿಸುವ ಪ್ಲಾನ್ ಕೂಡಾ ನಡೆದಿದೆ ಎನ್ನಲಾಗಿದೆ.

ಅತೃಪ್ತರ ಟೀಂ ನಲ್ಲಿ ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಮಾಜಿ ಸಚಿವ ಕೆ.ಶ್ರೀನಿವಾಸಗೌಡ, ಮಾಜಿ ಎಂಎಸ್‍ಐಎಲ್ ಅಧ್ಯಕ್ಷ ಅನಿಲ್‍ಕುಮಾರ್, ಮಾಜಿ ಸಚಿವ ನಿಸಾರ್ ಅಹಮದ್ ಸೇರಿದಂತೆ ಕಾಂಗ್ರೆಸ್ ಮತ್ತು ಜೆಡಿಎಸ್‍ನ ಟಿಕೆಟ್ ವಂಚಿತರು. ವರ್ತೂರ್ ಪ್ರಕಾಶ್‍ರವರ ವಿರೋಧಿ ಬಣ ಹಾಗೂ ಸಂಸದ ಕೆ.ಹೆಚ್. ಮುನಿಯಪ್ಪರ ವಿರೋಧಿ ಬಣ ಎಲ್ಲರೂ ಒಂದಾಗಿ ಈಗಾಗಲೇ ತಮ್ಮ ತಮ್ಮ ಬೆಂಬಲಿಗರ ಸಭೆಗಳನ್ನು ನಡೆಸಿ ರಣತಂತ್ರ ರೂಪಿಸಿದ್ದಾರೆ. ಮಾತ್ರವಲ್ಲದೆ ಇದಕ್ಕೆ ಪರೋಕ್ಷವಾಗಿ ಉಸ್ತುವಾರಿ ಸಚಿವ ರಮೇಶ್ ಕುಮಾರ್ ಬೆಂಬಲ ಕೂಡ ಇದೆ ಎನ್ನಲಾಗಿದೆ. ಶೀಘ್ರವೇ ಈ ಟೀಂನ ಅಧಿಕೃತ ಅಭ್ಯರ್ಥಿ ಹೆಸರು ಹೊರಬೀಳಲಿದೆ. ಈ ಮಧ್ಯೆ ಶಾಸಕ ವರ್ತೂರ್ ಪ್ರಕಾಶ್ ಮಾತ್ರ ಈ ಬಾರಿ ಗೆಲುವು ನಮ್ಮದೇ ಅನ್ನೋ ಉತ್ಸಾಹದಲ್ಲಿದ್ದಾರೆ.

Comments

Leave a Reply

Your email address will not be published. Required fields are marked *