ಕಾಂಗ್ರೆಸ್‌ ಪಕ್ಷದ ಖಾತೆಗಳಿಂದ 65 ಕೋಟಿ ರೂ. ಕಡಿತ – IT ವಿರುದ್ಧ ಗಂಭೀರ ಆರೋಪ

ನವದೆಹಲಿ: ಇತ್ತೀಚೆಗೆ ಕೇರಳದ ʻಜೈಹಿಂದ್ ಚಾನೆಲ್‌ʼನ ಬ್ಯಾಂಕ್‌ ಖಾತೆಗಳನ್ನು (Bank Account) ಸ್ಥಗಿತಗೊಳಿಸಿದ ಬೆನ್ನಲ್ಲೇ ಆದಾಯ ತೆರಿಗೆ ಇಲಾಖೆ ವಿರುದ್ಧ ಕಾಂಗ್ರೆಸ್ ಪಕ್ಷದ ಖಜಾಂಜಿ ಅಜಯ್ ಮಾಕೇನ್ (Ajay Maken) ಗಂಭೀರ ಆರೋಪ ಮಾಡಿದ್ದಾರೆ.

ಆದಾಯ ತೆರಿಗೆ ಇಲಾಖೆಯು (IT Department) ಕಾಂಗ್ರೆಸ್‌ ಪಕ್ಷದ ವಿವಿಧ ಖಾತೆಗಳಿಂದ ಕಾನೂನು ಬಾಹಿರವಾಗಿ 65 ಕೋಟಿ ರೂ. ಹಣವನ್ನು ಕಡಿತ ಮಾಡಿಕೊಂಡಿದೆ ಎಂದು ಮಾಕೇನ್‌ ಆರೋಪಿಸಿದ್ದಾರೆ. ಇದನ್ನೂ ಓದಿ: ಮಕ್ಕಳ್ ನೀಧಿ ಮೈಯಂ INDIA ಒಕ್ಕೂಟಕ್ಕೆ ಸೇರಿಲ್ಲ – ಕಮಲ್ ಹಾಸನ್ ಸ್ಪಷ್ಟನೆ

ದೆಹಲಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಕೇನ್, ಆದಾಯ ತೆರಿಗೆ ಇಲಾಖೆಯು ವಿವಿಧ ಬ್ಯಾಂಕ್‌ಗಳಿಗೆ ಪತ್ರ ಬರೆದು ಕಾಂಗ್ರೆಸ್ ಪಕ್ಷದ ಹಲವು ಖಾತೆಗಳಿಂದ 65 ಕೋಟಿ ರೂ. ಹಣವನ್ನು ಕಡಿತ ಮಾಡಿಕೊಂಡಿದೆ ಎಂದು ದೂರಿದ್ದಾರೆ.

ಬ್ಯಾಂಕ್‌ ಆಫ್‌ ಬರೋಡಾ ಖಾತೆಯಿಂದ 17.64 ಕೋಟಿ ರೂ., ಕೇಂದ್ರ ಬ್ಯಾಂಕ್‌ನಿಂದ 41.85 ಕೋಟಿ ರೂ. ಹಾಗೂ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನಿಂದ 74.62 ಲಕ್ಷ ಸೇರಿ ರಾಷ್ಟ್ರೀಯ ಕಾಂಗ್ರೆಸ್‌ನಿಂದ ಸುಮಾರು 60.25 ಕೋಟಿ ರೂ. ಹಾಗೂ ಎನ್‌ಎಸ್‌ಯುಐ ಮತ್ತು ಭಾರತೀಯ ಯುವ ಕಾಂಗ್ರೆಸ್‌ನಿಂದ 5 ಕೋಟಿ ರೂ.ಗಳನ್ನು ಕಡಿತಗೊಳಿಸಿದೆ ಎಂದು ದೂರಿದ್ದಾರೆ.

ಕಾಂಗ್ರೆಸ್ ಪಕ್ಷ ಹಾಗೂ ಭಾರತೀಯ ಯುವ ಕಾಂಗ್ರೆಸ್ ಹೆಸರಿನಲ್ಲಿ ಇದ್ದ ಖಾತೆಗಳಿಂದ ಹಣ ಹಿಂಪಡೆಯಲಾಗಿದೆ. ಹಾಗೆ ನೋಡಿದ್ರೆ ಆದಾಯ ತೆರಿಗೆ ಇಲಾಖೆಯು ಕಾಂಗ್ರೆಸ್ ಪಕ್ಷಕ್ಕೆ ಈ ಹಿಂದೆಯೇ ತೆರಿಗೆ ಕಟ್ಟುವಂತೆ ಆದಾಯ ತೆರಿಗೆ ಇಲಾಖೆ ಸೂಚನೆ ನೀಡಿತ್ತು. ಇದನ್ನು ಪ್ರಶ್ನಿಸಿ ಕಾಂಗ್ರೆಸ್ ಪಕ್ಷ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಿತ್ತು. ಈ ನಡುವೆಯೇ ಹಣ ಕಡಿತ ಮಾಡಲಾಗಿದೆ ಎಂದು ಅಜಯ್ ಮಾಕೇನ್ ಆರೋಪಿಸಿದ್ದಾರೆ. ಇದನ್ನೂ ಓದಿ: ಚಂಡೀಗಢ ಮೇಯರ್ ಚುನಾವಣೆ: ಎಎಪಿ ಅಭ್ಯರ್ಥಿಗೆ ಗೆಲುವು ಘೋಷಿಸಿದ ಸುಪ್ರೀಂ ಕೋರ್ಟ್

ಕಾಂಗ್ರೆಸ್ ಪಕ್ಷದ ಆದಾಯ ತೆರಿಗೆ ವಿವಾದವು ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿದೆ. ಹೀಗಿದ್ದೂ ಕಾಂಗ್ರೆಸ್ ಪಕ್ಷದ ಖಾತೆಯಿಂದ ಹಣ ಕಡಿತ ಆಗಿದೆ. ಈ ಹಿಂದೆಯೂ ಐಟಿ ಕಾಂಗ್ರೆಸ್ ಪಕ್ಷಕ್ಕೆ 210 ಕೋಟಿ ರೂ. ಆದಾಯ ತೆರಿಗೆ ಪಾವತಿ ಮಾಡುವಂತೆ ಸೂಚನೆ ನೀಡಿತ್ತು. ಇದೀಗ ಆದಾಯ ತೆರಿಗೆ ಇಲಾಖೆ ಪ್ರಜಾಪ್ರಭುತ್ವ ವಿರೋಧಿ ಧೋರಣೆ ಅನುಸರಿಸುತ್ತಿದ್ದು, ತಮ್ಮ ಪಕ್ಷದ ಖಾತೆಗಳಿಂದ ಹಣವನ್ನು ಕಡಿತ ಮಾಡಿಕೊಂಡಿದೆ ಎಂದು ಅಜಯ್ ಮಾಕೇನ್ ಆಪಾದಿಸಿದ್ದಾರೆ.

115 ಕೋಟಿ ಹಣ ಫ್ರೀಜ್‌:
ಚುನಾವಣಾ ಬಾಂಡ್‌ಗಳನ್ನು ಸುಪ್ರೀಂ ಕೋರ್ಟ್‌ ನಿಷೇಧಿಸಿದ್ದ ಮರು ದಿನವೇ ಕಾಂಗ್ರೆಸ್‌ ಪಕ್ಷಕ್ಕೆ ಸೇರಿದ ಮೂರು ಬ್ಯಾಂಕ್‌ ಖಾತೆಗಳನ್ನು ಸ್ಥಗಿತಗೊಳಿಸಿದ ಬೆಳವಣಿಗೆ ನಡೆದಿತ್ತು. ಸಾರ್ವಜನಿಕರಿಂದ ದೇಣಿಗೆ ರೂಪದಲ್ಲಿ ಸಂಗ್ರಹಿಸಲಾದ 210 ಕೋಟಿ ರೂ.ಗಳಿಗೆ ತೆರಿಗೆ ಪಾವತಿಸದ ಕಾರಣ ಆದಾಯ ತೆರಿಗೆ ಇಲಾಖೆಯು ಕಾಂಗ್ರೆಸ್‌ಗೆ ಸೇರಿದ ಮೂರು ಬ್ಯಾಂಕ್‌ ಖಾತೆಗಳನ್ನು ಗುರುವಾರ ರಾತ್ರಿಯಿಂದಲೇ ಮುಟ್ಟುಗೋಲು ಹಾಕಿಕೊಂಡಿರುವುದು ವರದಿಯಾಗಿತ್ತು. ಆದಾಯ ತೆರಿಗೆ ಮೇಲ್ಮನವಿ ನ್ಯಾಯ ಮಂಡಳಿ ಆದೇಶದ ಬಳಿಕ ಬ್ಯಾಂಕ್‌ ಖಾತೆಗಳು ಚಾಲ್ತಿಗೆ ಬಂದಿದ್ದರೂ 115 ಕೋಟಿ ರೂ. ಹಣವನ್ನು ದಂಡದ ರೂಪದಲ್ಲಿ ಫ್ರೀಜ್‌ ಮಾಡಲಾಗಿತ್ತು. 115 ಕೋಟಿ ರೂ. ಹಣವನ್ನು ಬ್ಯಾಂಕ್‌ ಖಾತೆಯಲ್ಲಿ ಉಳಿಸಿ, ಪಕ್ಷದ ರಾಜಕೀಯ ಚಟುವಟಿಕೆಗಳಿಗೆ ಉಳಿದ ಹಣವನ್ನು ವಿನಿಯೋಗ ಮಾಡುತ್ತೇವೆ ಎಂದು ಅಜಯ್‌ ಮಾಕೆನ್‌ ಹೇಳಿದರು.