ಅತ್ತಿಗೆ ಸೋತಿದ್ದಕ್ಕೆ ಜೆಡಿಎಸ್ ಕಾರ್ಯಕರ್ತನ ತಾಯಿಗೆ ಕೈ ನಾಯಕನಿಂದ ಚಾಕು ಇರಿತ

ಕೊಪ್ಪಳ: ಚುನಾವಣೆಯಲ್ಲಿ ಅತ್ತಿಗೆ ಸೋತ ಹಿನ್ನೆಲೆಯಲ್ಲಿ ಮೈದುನ ಜೆಡಿಎಸ್ ಕಾರ್ಯಕರ್ತನ ತಾಯಿಗೆ ಚಾಕು ಇರಿದ ಘಟನೆ ಕೊಪ್ಪಳದಲ್ಲಿ ನಡೆದಿದೆ.

ನಗರದ 19ನೇ ವಾರ್ಡ್ ನಲ್ಲಿ ಘಟನೆ ನಡೆದಿದ್ದು, ಜೆಡಿಎಸ್ ಕಾರ್ಯಕರ್ತನ ತಾಯಿ ರೆಹಮತ್ ಬಿಗೆ ಚಾಕು ಹಾಕಿ ಕಾಂಗ್ರೆಸ್ ಮುಖಂಡ ಸೈಯ್ಯದ್ ನಿಜಾಮುದ್ದೀನ್ ಪರಾರಿಯಾಗಿದ್ದಾನೆ.

ನಗರಸಭೆ ವ್ಯಾಪ್ತಿಯ 19ನೇ ವಾರ್ಡಿನಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಮಧ್ಯೆ ನೇರ ಹಣಾಹಣಿ ಏರ್ಪಟ್ಟಿತ್ತು. ಕೊನೆ ಕ್ಷಣದಲ್ಲಿ ಜೆಡಿಎಸ್ ಅಭ್ಯರ್ಥಿ ಆಯಿಷಾ ರುಬೀನಾ ಗೆಲವು ಸಾಧಿಸಿದರು. ಈ ಹಿನ್ನೆಲೆಯಲ್ಲಿ ಇದರಿಂದ ಆಕ್ರೋಶಗೊಂಡ ಪ್ರತಿ ಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿಯಾದ ಸೈಯ್ಯದ್ ಸಾಜಿಯಾ ಹುಸೇನಿ ಮೈದುನನಾದ ಸೈಯ್ಯದ್ ನಿಜಾಮುದ್ದೀನ್ ಹುಸೇನಿ ಜೆಡಿಎಸ್ ಬೆಂಬಲಿಸದ ಮನೆಯವರಿಗೆ ಚಾಕು ಹಾಕಿದ್ದಾನೆ.

ಅತ್ತಿಗೆ ಸೋಲುತ್ತಿದ್ದಂತೆ ವಾರ್ಡ್‍ಗೆ ಬಂದ ಸೈಯ್ಯದ್ ಹಾಗೂ ಆತನ ಸಹಚರರು ರೆಹಮತ್ ಮನೆಯಲ್ಲಿ ಹುಡಕಾಟ ನಡೆಸಿದ್ದಾರೆ. ಅಲ್ಲದೇ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಮನೆಯಲ್ಲಿ ಯಾರೂ ಗಂಡಸರಿಲ್ಲದ ಕಾರಣ ರೆಹಮತ್.ಬಿ ಅವರಿಗೆ ಚಾಕು ಇರಿದು ಪರಾರಿಯಾಗಿದ್ದಾನೆ

ಸೈಯ್ಯದ್ ಜೊತೆ ಬಂದಿದ್ದ ಹಾಜಿ ಹುಸೇನಿಯನ್ನು ಕೊಪ್ಪಳ ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ರಹಮತ್.ಬಿ ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಹೊಟ್ಟೆ ಭಾಗಕ್ಕೆ ಸ್ವಲ್ಪ ಪ್ರಮಾಣದ ಗಾಯವಾಗಿದ್ದು, ಯಾವುದೇ ಪ್ರಾಣಾಪಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಚಾಕು ಹಾಕಿ ಪರಾರಿಯಾದ ಸೈಯ್ಯದ್ ನಿಜಾಮುದ್ದೀನ್ ಹುಸೇನಿಗೆ ಪೊಲೀಸರು ಬಲೆ ಬೀಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *