ಪಾದಯಾತ್ರೆ ಮೂಲಕ ಶಕ್ತಿ ಪ್ರದರ್ಶನ, ಗೋವು ಪೂಜೆ ಮಾಡಿ ಬಿಜೆಪಿಗೆ ಟಾಂಗ್- ಕಾರ್ಕಳದಲ್ಲಿ ಎಲೆಕ್ಷನ್ ಫೈಟ್ ಜೋರು

ಉಡುಪಿ: ಕರ್ನಾಟಕ ವಿಧಾನಸಭಾ ಚುನಾವಣೆಗೆ ಮೂರು ತಿಂಗಳು ಬಾಕಿ ಇರುವಾಗಲೇ ಕರಾವಳಿ ಜಿಲ್ಲೆಯ ಉಡುಪಿಯಲ್ಲಿ ಟಿಕೆಟ್ ಪಡೆಯುವ ಕಸರತ್ತು ಜೋರಾಗಿದೆ. ಉಡುಪಿಯ ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ಕಾರ್ಕಳ ಈ ಬೆಳವಣಿಗೆಯಲ್ಲಿ ಹೆಚ್ಚು ಮುಂದಿದೆ. ಕಾಂಗ್ರೆಸ್‍ನೊಳಗೆ ಈವರೆಗೆ ಒಟ್ಟು ಮೂರು ಮಂದಿ ಟಿಕೆಟ್ ಆಕಾಂಕ್ಷಿಗಳಿದ್ದಾರೆ.

ಮಾಜಿ ಶಾಸಕ ಗೋಪಾಲ ಭಂಡಾರಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಮುನಿಯಾಲು ಉದಯ ಕುಮಾರ್ ಶೆಟ್ಟಿ ನಡುವೆ ಈವರೆಗೆ ಟಿಕೆಟ್ ಫೈಟ್ ನಡೆಯುತ್ತಿತ್ತು. ಇದೀಗ ಫೀಲ್ಡಿಗೆ ಮಾಜಿ ಸಿಎಂ ವೀರಪ್ಪ ಮೊಯಿಲಿ ಪುತ್ರ ಹರ್ಷ ಮೊಯಿಲಿ ಹೆಸರು ಎಂಟ್ರಿ ಕೊಟ್ಟಿದೆ. ವೀರಪ್ಪ ಮೊಯಿಲಿಯ ತವರು ಜಿಲ್ಲೆಯಲ್ಲಿ ಛಾಪು ಉಳಿಸಿಕೊಳ್ಳಲು ಹೊಸ ದಾಳ ಉರುಳಿಸಿದ್ದಾರೆ. ಕಾಂಗ್ರೆಸ್‍ನ ಒಳಗೆ ಮೂರು ಮಂದಿಯ ಹೆಸರಿನ ಜೊತೆ ಮೂರು ಅಭಿಪ್ರಾಯಗಳು ಓಡಾಡುತ್ತಿದೆ. ಈ ನಡುವೆ ಬಿಜೆಪಿಯಿಂದ ಸೀಟು ಫಿಕ್ಸ್ ಮಾಡಿಕೊಂಡಿರುವ ಶಾಸಕ ಸುನೀಲ್ ಕುಮಾರ್ ಪ್ರಖರ ಹಿಂದುತ್ವವಾದಿ. ಹಿಂದೂಗಳ ಮತವನ್ನೂ ಕಾಂಗ್ರೆಸ್ ಸೆಳೆಯುವ ಉದ್ದೇಶದಿಂದ ಜಿಲ್ಲಾ ಉಪಾಧ್ಯಕ್ಷ ಉದಯಕುಮಾರ್ ಶೆಟ್ಟಿ, ದಂಪತಿ ಸಮೇತ ಸಾರ್ವಜನಿಕವಾಗಿ ಗೋವು ಪೂಜೆ ಮಾಡಿದ್ದಾರೆ.

ಹಿರಿಯ ಪುರೋಹಿತರಿಗೆ ಗೋವಿನ ದಾನ ಮಾಡಿದ್ದಾರೆ. ಸಾರ್ವಜನಿಕ ಸಭೆಯಲ್ಲಿ ನಡೆದ ಈ ವಿಧಿಯಲ್ಲಿ ನಾಲ್ಕು ಹಸುಗಳಿಗೆ ಪೂಜೆ ಸಲ್ಲಿಕೆ ಮಾಡಿದ್ದಾರೆ. ಈ ಮೂಲಕ ಗೋವು ಕೇವಲ ಬಿಜೆಪಿಯ ಸ್ವತ್ತು ಅಲ್ಲ, ಕಾಂಗ್ರೆಸ್ ಕೂಡಾ ಗೋವನ್ನು ಪೂಜಿಸುತ್ತದೆ, ಆರಾಧಿಸುತ್ತದೆ ಎಂದು ಕಾಂಗ್ರೆಸ್ ಹೇಳಿದೆ. ಕಾಂಗ್ರೆಸ್ ನಲ್ಲಿ ಈ ಬಾರಿಯಾದರೂ ಯುವಕರಿಗೆ ಅವಕಾಶ ಕೊಡಿ. ಈ ಮೂಲಕ ಪಕ್ಷವನ್ನು ಉಳಿಸಿ ಎಂದು ಕಾರ್ಯಕರ್ತರು ಹೈಕಮಾಂಡನ್ನು ಒತ್ತಾಯಿಸಿದ್ದಾರೆ. ಮೂರು ತಿಂಗಳಿರುವಾಗ ಮೂರು ಅಭ್ಯರ್ಥಿಗಳು ಟಿಕೆಟ್ ಜಿದ್ದಿಗೆ ಬಿದ್ದಿರುವುದು ಹೈಕಮಾಂಡ್‍ಗೆ ತಲೆನೋವಾಗಿದೆ.

ಓರ್ವ ಟಿಕೆಟ್ ಆಕಾಂಕ್ಷಿ ಮುನಿಯಾಲು ಉದಯ ಕುಮಾರ್ ಶೆಟ್ಟಿ ಮಾತನಾಡಿ, ಯಾರಿಗೂ ಸೀಟು ಕೇಳುವ ಅವಕಾಶ ಇದೆ. ಈ ಬಾರಿ ನಾನೂ ಒಬ್ಬ ಟಿಕೆಟ್ ಆಕಾಂಕ್ಷಿ. ಕಳೆದ 30 ವರ್ಷದಿಂದ ನಾನು ಸಕ್ರೀಯ ಕಾರ್ಯಕರ್ತ. ಈಗ ಉಪಾಧ್ಯಕ್ಷನಾಗಿ ಪಕ್ಷ ಸಂಘಟನೆಯ ಜವಾಬ್ದಾರಿಯನ್ನು ನಿರ್ವಹಿಸಿದ್ದೇನೆ. ಯುವ ಅಭ್ಯರ್ಥಿ ಬೇಕು ಎಂಬುದು ಪ್ರತಿ ಬೂತ್‍ಗಳಿಂದ ಕೇಳಿ ಬರುತ್ತಿರುವ ಅಭಿಪ್ರಾಯ ಈ ಹಿನ್ನೆಲೆಯಲ್ಲಿ ನಾನು ಟಿಕೆಟ್ ಕೇಳುತ್ತಿದ್ದೇನೆ. ಅವಕಾಶ ಕೊಟ್ಟರೆ ಬಿಜೆಪಿಗೆ ಪ್ರಬಲ ಸ್ಪರ್ಧೆ ಕೊಟ್ಟು ಕಾಂಗ್ರೆಸ್ ಗೆಲ್ಲಿಸುತ್ತೇನೆ ಎಂದು ಹೇಳಿದರು.

ಎರಡು ಬಾರಿ ಗೆದ್ದು, ಎರಡು ಬಾರಿ ಸೋತ ಗೋಪಾಲ ಭಂಡಾರಿ ಈ ಬಾರಿ ಮತ್ತೆ ಸ್ಪರ್ಧೆಗಿಳಿಯಲು ಸಿದ್ಧತೆ ಮಾಡಿದ್ದಾರೆ. ಕಾರ್ಕಳದಲ್ಲಿ ಆರು ಬಾರಿ ಶಾಸಕರಾಗಿ ಸಿಎಂ ಆಗಿದ್ದ ಡಾ. ವೀರಪ್ಪ ಮೋಯಿಲಿ ಕಾರ್ಕಳದ ಮಟ್ಟಿಗೆ ಹೈಕಮಾಂಡ್ ಇದ್ದಂತೆ. ಪರಿವರ್ತನಾಯಾತ್ರೆ ವೇಳೆ ಗೋಪಾಲ ಭಂಡಾರಿಗೆ ಕೆಲಸ ಶುರು ಮಾಡಿ ಅಂತ ಸಿಎಂ ಸಿದ್ಧರಾಮಯ್ಯ ಹೇಳಿ ಹೋಗಿದ್ದರು. ವಾರದ ಹಿಂದೆ ಆದ ಬೆಳಣಿಗೆಯಲ್ಲಿ ವೀರಪ್ಪ ಮೊಯಿಲಿ ತನ್ನ ಮಗ ಕೂಡಾ ಟಿಕೆಟ್ ಆಕಾಂಕ್ಷಿ ಅಂತ ಒಂದು ದಾಳ ಉರುಳಿಸಿದ್ದಾರೆ. ಹೀಗಾಗಿ ಕಾರ್ಕಳದ ಕಣ ಈ ಬಾರಿ ಕುತೂಹಲದ ಕೇಂದ್ರವಾಗಿದೆ.

 

Comments

Leave a Reply

Your email address will not be published. Required fields are marked *