ಬಳ್ಳಾರಿಯಲ್ಲಿ ಡಿಕೆ ಶಿವಕುಮಾರ್ ಭಾಷಣಕ್ಕೆ ಕೈ ಬೆಂಬಲಿಗರಿಂದ ಅಡ್ಡಿ

ಬಳ್ಳಾರಿ: ನಮ್ಮ ಶಾಸಕ ಗಣೇಶರನ್ನು ಬಿಡಿಸಿ ನಂತರ ಮಾತನಾಡಿ ಎಂದು ಬಳ್ಳಾರಿಯಲ್ಲಿ ಕಾಂಗ್ರೆಸ್ ಬೆಂಬಲಿಗರು ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಅವರಿಗೆ ಭಾಷಣಕ್ಕೆ ಅಡ್ಡಿ ಮಾಡಿದ್ದಾರೆ.

ಡಿ.ಕೆ ಶಿವಕುಮಾರ್ ಇಂದು ಕುರುಗೋಡು ಕಾರ್ಯಕರ್ತರ ಸಭೆಯಲ್ಲಿ ಭಾಷಣ ಮಾಡುತ್ತಿದ್ದರು. ಈ ವೇಳೆ ಜನರು ನಮ್ಮ ಶಾಸಕ ಗಣೇಶರನ್ನು ಬಿಡಿಸಿ. ನಂತರ ನೀವು ಮಾತನಾಡಿ. ಮೂರು ತಿಂಗಳಾಯ್ತು ಬರೀ ಇದನ್ನೇ ಹೇಳುತ್ತಿದ್ದೀರಿ. ನಮ್ಮ ಶಾಸಕ ಯಾವ ತಪ್ಪು ಮಾಡಿಲ್ಲ. ಮಾಡಿರುವುದಾದರೆ ಇಬ್ಬರು ಶಾಸಕರು ತಪ್ಪು ಮಾಡಿದ್ದಾರೆ. ಒಬ್ಬರಿಗೊಂದು ನ್ಯಾಯ ಮತ್ತೊಬ್ಬರಿಗೊಂದು ನ್ಯಾಯವೇ ಎಂದು ಪ್ರಶ್ನಿಸಿ ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ವೇಳೆ ಅಭ್ಯರ್ಥಿ ಉಗ್ರಪ್ಪ ಸಮಾಧಾನ ಮಾಡಲು ಮುಂದಾದರು. ಈ ಹಿಂದೆ ಉಗ್ರಪ್ಪ ಅವರನ್ನು ಕೂಡ ಜನರು ಕಂಪ್ಲಿಯಲ್ಲಿ ತರಾಟೆಗೆ ತೆಗೆದುಕೊಳ್ಳಲಾಗಿತ್ತು.

ನಡೆದಿದ್ದೇನು?
ಜನವರಿ 19ರ ರಾತ್ರಿ ಈಗಲ್ ಟನ್ ರೆಸಾರ್ಟಿನಲ್ಲಿ ಕಂಪ್ಲಿ ಗಣೇಶ್ ಕುಡಿದು ಗಲಾಟೆ ನಡೆಸಿ ಶಾಸಕ ಆನಂದ್ ಸಿಂಗ್ ಮೇಲೆ ಮನಸ್ಸೋ ಇಚ್ಛೆ ಹಲ್ಲೆ ನಡೆಸಿದ್ದರು. ಹಲ್ಲೆ ಪ್ರಕರಣ ಸಂಬಂಧ ರಾಮನಗರ ಜಿಲ್ಲೆಯ ಬಿಡದಿ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದ್ದು, ಪೊಲೀಸ್ ವಿಶೇಷ ತಂಡಗಳನ್ನು ರಚಿಸಿ ಹುಡುಕಾಟ ನಡೆಸಿ ಬಂಧಿಸಿದ್ದರು. ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆಗೈದ ಶಾಸಕ ಗಣೇಶ್ ವಿರುದ್ಧ ಬಿಡದಿ ಠಾಣೆಯಲ್ಲಿ ಐಪಿಸಿ ಸೆಕ್ಷನ್ 323(ಹಲ್ಲೆ), 324(ದೊಣ್ಣೆಯಿಂದ ಹಲ್ಲೆ), 307(ಕೊಲೆ ಯತ್ನ), 504(ಉದ್ದೇಶ ಪೂರ್ವಕ ಶಾಂತಿ ಕದಡುವುದು) 506(ಜೀವ ಬೆದರಿಕೆ) ಅಡಿ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದ್ದು, ಈಗ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ಮಾಡಿದ ಹಿನ್ನೆಲೆಯಲ್ಲಿ ಶಾಸಕ ಗಣೇಶ್ ಅವರನ್ನು ಅಮಾನತು ಮಾಡಲಾಗಿದೆ. ಕೆಪಿಸಿಸಿ ಸಭೆ ನಡೆಸಿ ಕಾಂಗ್ರೆಸ್ ಪಕ್ಷದಿಂದ ಶಾಸಕ ಗಣೇಶ್ ಅವರನ್ನು ಅಮಾನತು ಮಾಡುವ ನಿರ್ಧಾರವನ್ನು ಕೈಗೊಂಡಿತ್ತು.

Comments

Leave a Reply

Your email address will not be published. Required fields are marked *