ಚುನಾವಣಾ ಆಯೋಗದ ಮಧ್ಯೆ ಗೊಂದಲ ಇದೆ- ರೇವಣ್ಣ

ಬೆಂಗಳೂರು: ರಾಜ್ಯ ಹಾಗೂ ಕೇಂದ್ರ ಚುನಾವಣಾ ಆಯೋಗಗಳ ಮಧ್ಯೆಯೇ ಗೊಂದಲವಿದೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಚುನಾವಣಾ ಆಯೋಗದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ಜೆ.ಪಿ.ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಕೋರ್ಟ್ ಆದೇಶಕ್ಕೆ ತಲೆ ಬಾಗುತ್ತೇನೆ. ಕೋರ್ಟ್ ಅದೇಶದ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಆದರೆ, ರಾಜ್ಯ ಚುನಾವಣಾ ಆಯುಕ್ತರು ಅನರ್ಹರು ಚುನಾವಣೆಗೆ ನಿಲ್ಲಲು ಸಾಧ್ಯವಿಲ್ಲ ಎನ್ನುತ್ತಾರೆ. ಅತ್ತ ಸುಪ್ರೀಂ ಕೋರ್ಟ್‍ನಲ್ಲಿ ಕೇಂದ್ರ ಚುನಾವಣಾ ಆಯೋಗದವರು ಸ್ಪರ್ಧೆ ಮಾಡಬಹುದು ಎನ್ನುತ್ತಾರೆ. ಈ ಗೊಂದಲ ನಮಗೆ ಅನುಮಾನ ಮೂಡಿಸಿದೆ ಎಂದು ಚುನಾವಣಾ ಆಯೋಗದ ವಿರುದ್ಧ ಹರಿಹಾಯ್ದರು.

ಚುನಾವಣಾ ಆಯೋಗದ ಈ ನಡವಳಿಕೆ ಹಿಂದೆ ಯಾರಿದ್ದಾರೆ ನಮಗೆ ಗೊತ್ತಿಲ್ಲ. ರಾಜ್ಯ ಚುನಾವಣಾ ಆಯುಕ್ತರು ದೊಡ್ಡವರಾ ಅಥವಾ ಕೇಂದ್ರ ಚುನಾವಣಾ ಆಯೋಗ ದೊಡ್ಡದಾ ಹೊತ್ತಿಲ್ಲ. ಎರಡೂ ರಾಷ್ಟ್ರೀಯ ಪಕ್ಷಗಳು ಈ ಬಗ್ಗೆ ಧ್ವನಿ ಎತ್ತಬೇಕು. ಈ ಕುರಿತು ರಾಜ್ಯದ ಜನತೆ ನಿರ್ಧರಿಸುತ್ತಾರೆ. ಸ್ಪೀಕರ್ ಆದೇಶಕ್ಕೆ ಕೋರ್ಟ್ ತಡೆ ಕೊಟ್ಟಿಲ್ಲ. ಅದಿನ್ನು ಜೀವಂತವಾಗಿ ಇದೆ. ಮುಂದೆ ಏನಾಗುತ್ತೋ ಕಾದು ನೋಡೋಣ ಎಂದು ತಿಳಿಸಿದರು.

ಉಪಚುನಾವಣೆ ಹಿನ್ನೆಲೆ ಕ್ಷೇತ್ರಗಳ ಉಸ್ತುವಾರಿಗಳನ್ನು ನೇಮಿಸಲಾಗಿತ್ತು. ಇದೀಗ ಚುನಾವಣೆ ರದ್ದಾಗಿದೆ. ಕೆ.ಆರ್.ಪೇಟೆ ಕ್ಷೇತ್ರಕ್ಕೆ ಪುಟ್ಟರಾಜು, ಹುಣಸೂರು ಕ್ಷೇತ್ರಕ್ಕೆ ಕುಮಾರಸ್ವಾಮಿ, ದೇವೇಗೌಡರು ಹಾಗೂ ಸಾ.ರಾ.ಮಹೇಶ್ ನೇತೃತ್ವ ವಹಿಸಲಿದ್ದಾರೆ. 15 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳು ತಯಾರಿದ್ದಾರೆ. ಆದರೆ ಸುಪ್ರೀಂ ಕೋರ್ಟ್ ಉಪಚುನಾವಣೆಗೆ ತಡೆ ನೀಡಿದೆ. ಹೀಗಾಗಿ ನಮ್ಮ ನಾಯಕರು ಕ್ಷೇತ್ರದ ಮುಖಂಡರ ಜೊತೆ ಚರ್ಚಿಸುತ್ತಾರೆ. ಎರಡೂ ಪಕ್ಷಕ್ಕೆ ಸ್ಪರ್ಧೆ ನಿಡುವ ಅಭ್ಯರ್ಥಿಗಳನ್ನು ಹಾಕುತ್ತೇವೆ. ಚುನಾವಣೆ ಮುಂದೂಡಿದರೂ ನಮ್ಮ ಕ್ಷೇತ್ರದ ಕೆಲಸಗಳನ್ನು ಮಾಡುತ್ತೇವೆ. ಪಕ್ಷದ ಸಂಘಟನೆ ಮುಂದುವರಿಯುತ್ತದೆ ಎಂದು ಮಾಹಿತಿ ನೀಡಿದರು.

Comments

Leave a Reply

Your email address will not be published. Required fields are marked *