ಕೇಜ್ರಿವಾಲ್‌, ಮಲ್ಲಿಕಾರ್ಜುನ ಖರ್ಗೆ ವಿರುದ್ಧ ದೂರು ದಾಖಲು

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಜಾತಿ ಬಗ್ಗೆ ಉಲ್ಲೇಖಿಸಿ ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ವಿರುದ್ಧ ದೂರು ದಾಖಲಿಸಲಾಗಿದೆ.

ಸುಪ್ರೀಂ ಕೋರ್ಟ್ ವಕೀಲ ವಿನೀತ್ ಜಿಂದಾಲ್ ಅವರು ದೂರು ಸಲ್ಲಿಸಿದ್ದಾರೆ. ಇವರ ಹೇಳಿಕೆಯು ಸಮುದಾಯಗಳು/ಗುಂಪುಗಳ ನಡುವೆ ದ್ವೇಷ ಉತ್ತೇಜಿಸುವ ಉದ್ದೇಶವನ್ನು ಹೊಂದಿದೆ. ಅಲ್ಲದೇ ಭಾರತ ಸರ್ಕಾರದ ಬಗ್ಗೆ ಅಪನಂಬಿಕೆ ಸೃಷ್ಟಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರವು ಉದ್ದೇಶಪೂರ್ವಕವಾಗಿ ಆಹ್ವಾನ ನೀಡಿಲ್ಲ ಎಂದು ಎಂಬ ಕಾರಣಕ್ಕೆ ರಾಷ್ಟ್ರಪತಿಗಳ ಜಾತಿ ಉಲ್ಲೇಖಿಸಿ ಖರ್ಗೆ ಮತ್ತು ಕೇಜ್ರಿವಾಲ್ ಹೇಳಿಕೆ ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ನಾಯಕರ ಹೇಳಿಕೆಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ನಮ್ಮ ಗೌರವಾನ್ವಿತ ರಾಷ್ಟ್ರಪತಿಗಳು ಆದಿವಾಸಿ ಮತ್ತು ಎಸ್ಟಿ ಸಮುದಾಯಕ್ಕೆ ಸೇರಿದವರಾಗಿದ್ದು, ಆ ಸಮುದಾಯವನ್ನು ಪ್ರಚೋದಿಸುತ್ತದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ರಾಜಕೀಯ ನಾಯಕರು ತಮ್ಮ ರಾಜಕೀಯ ಲಾಭಕ್ಕಾಗಿ ಅತ್ಯುನ್ನತ ಸಾಂವಿಧಾನಿಕ ಹುದ್ದೆಗಳನ್ನು ಅವಮಾನಿಸುವ ಮಟ್ಟಕ್ಕೆ ಇಳಿಯಲು ಬಿಡಬಾರದು. ಇದು ಗುರುತಿಸಬಹುದಾದ ಅಪರಾಧಗಳು ಎಂದು ದೂರಿನಲ್ಲಿ ತಿಳಿಸಲಾಗಿದೆ.