ರೈತರಿಗೆ ಸಿಎಂ ಭದ್ರತಾ ಸಿಬ್ಬಂದಿ ಒದ್ದ ಆರೋಪ – ದೂರು ದಾಖಲು

ದಾವಣಗೆರೆ: ವಿವಿಧ ಬೆಳೆಗಳಿಗೆ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಸಿಎಂ ಸಿದ್ದರಾಮಯ್ಯ (Siddaramaiah) ಅವರಿಗೆ ಮನವಿ ಸಲ್ಲಿಸಲು ಹೋಗಿದ್ದ ವೇಳೆ ಪೊಲೀಸರು ರೈತರ ಜೊತೆ ಅಮಾನವೀಯವಾಗಿ ವರ್ತಿಸಿದ್ದಾರೆಂಬ ಆರೋಪ ಕೇಳಿಬಂದಿದೆ.

ಸಿಎಂ ಸಿದ್ದರಾಮಯ್ಯ ದಾವಣಗೆರೆಯಲ್ಲಿ (Davanagere) ವಿವಿಧ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ, ಶಂಕುಸ್ಥಾಪನೆ ಕಾರ್ಯಕ್ರಮ ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪನವರ 95ನೇ ಹುಟ್ಟುಹಬ್ಬ ಆಚರಣೆ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ವೇಳೆ ಸರ್ಕೀಟ್ ಹೌಸ್ ಬಳಿ ರೈತರು ಮನವಿ ಪತ್ರ ನೀಡಲು ಬಂದಿದ್ದರು. ಈ ಸಂದರ್ಭ ಭದ್ರತಾ ಸಿಬ್ಬಂದಿ ಹಾಗೂ ಪೊಲೀಸರು, ಸಿಎಂಗೆ ಮನವಿ ಪತ್ರ ಕೊಡಲು ಬಂದಿದ್ದ ರೈತರಿಗೆ ಅನುವು ಮಾಡಿಕೊಟ್ಟಿಲ್ಲ ಎನ್ನಲಾಗಿದೆ. ಅಲ್ಲದೇ ರೈತರ ಎದೆಗೆ ಕೈ ಹಾಕಿ ದಬ್ಬಿ, ಕೆಳಗೆ ಬೀಳಿಸಿ ಕಾಲಿನಿಂದ ಒದ್ದಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: 5 ಎಸೆತಗಳಲ್ಲಿ 5 ವಿಕೆಟ್‌ – ಮತ್ತೆ ದಿಗ್ವೇಶ್‌ ರಾಥಿ ಕಮಾಲ್‌

ಈ ಸಂಬಂಧ ಸಿಎಂ ಭದ್ರತಾ ಸಿಬ್ಬಂದಿ ವಿರುದ್ಧ ರೈತ ಮುಖಂಡ ಬಲ್ಲೂರು ರವಿಕುಮಾರ್ (Balluru Ravikumar) ಎಂಬುವವರು ವಿದ್ಯಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಉತ್ತರ ಕನ್ನಡದಲ್ಲಿ ಭಾರೀ ಮಳೆ – 8 ತಾಲೂಕುಗಳ ಶಾಲೆಗಳಿಗೆ ಜೂ.17 ರಂದು ರಜೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ನೀಡಲು ಬಂದ ವೇಳೆ ಪೋಲೀಸರು ರೈತರನ್ನು ತಳ್ಳಿದ್ದಾರೆಂದು ಸಿಟ್ಟಾಗಿ ಸಿಎಂ ಕಾರಿನ ಮುಂದೆ ಮಲಗಿ, ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಂತರ ರೈತರ ಆಕ್ರೋಶಕ್ಕೆ ಮಣಿದ ಪೋಲೀಸರು, ಬಲ್ಲೂರು ರವಿಕುಮಾರ್ ಅವರನ್ನು ಸಿಎಂ ಬಳಿ ತೆರಳಲು ಅನುವು ಮಾಡಿಕೊಟ್ಟರು.