ಮಗುವಿನ ಗಂಟಲಲ್ಲಿ ಸಿಕ್ಕಿಕೊಂಡ ನಾಣ್ಯ: ಚಿಕಿತ್ಸೆ ನೀಡದೇ ಅಲೆದಾಡಿಸಿದ 4 ಆಸ್ಪತ್ರೆಗಳು!

ಕೋಲ್ಕತ್ತಾ:ಸರಿಯಾದ ಸಮಯದಲ್ಲಿ ಸೂಕ್ತ ಚಿಕಿತ್ಸೆ ದೊರೆಯದೆ ನಾಣ್ಯ ನುಂಗಿದ್ದ 4 ವರ್ಷದ ಮಗುವೊಂದು ಪರದಾಡಿದ ಘಟನೆ ಪಶ್ಚಿಮ ಬಂಗಾಳದ ಕೋಲ್ಕತ್ತಾದ ಗಂಗಾಪುರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಶನಿವಾರ ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಮನೆಯೊಳಗೆ ಆಟವಾಡುತ್ತಿದ್ದಾಗ 4 ವರ್ಷದ ಆಗ್ರ್ಯ ಬಿಸ್ವಾಸ್ ಏಕಾಏಕಿ 1 ರೂಪಾಯಿ ನಾಣ್ಯವನ್ನು ನುಂಗಿದ್ದಾನೆ. ನಾಣ್ಯ ಗಂಟಲಲ್ಲಿ ಸಿಕ್ಕಿಕೊಂಡು ಅಗ್ರ್ಯ ಜೋರಾಗಿ ಅಳುತ್ತಿದ್ದ. ಕೂಡಲೇ ಅವನನ್ನು ಪರೀಕ್ಷಿಸಿದಾಗ ನಾಣ್ಯ ನುಂಗಿರುವುದು ತಿಳಿಯಿತು ಎಂದು ಮಗುವಿನ ಅಜ್ಜ ದಿನೇಶ್ ಬಿಸ್ವಾಸ್ ತಿಳಿಸಿದ್ದಾರೆ.

ಮಗುವನ್ನು 2 ಗಂಟೆಹೊತ್ತಿಗೆ ಹತ್ತಿರದ ಕಲ್ಯಾಣಿ ಮೆಡಿಕಲ್ ಕಾಲೇಜು ಆಸ್ಪತ್ರೆ ಹಾಗೂ ಜೆಎನ್‍ಎಂ ಆಸ್ಪತ್ರೆಯ ವೈದ್ಯರುಗಳಿಗೆ ತೋರಿಸಲಾಯಿತು. ಆದರೆ ಮಗುವನ್ನು ಪರೀಕ್ಷಿಸಿದ ಅವರು ನಮ್ಮ ಬಳಿ ಸರಿಯಾದ ಉಪಕರಣಗಳಿಲ್ಲ, ಮಗುವನ್ನು ಎನ್‍ಆರ್‍ಎಸ್ ಆಸ್ಪತ್ರೆ ಅಥವಾ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ತೋರಿಸಿ ಎಂದು ಸಲಹೆ ನೀಡಿದರು. ನಾವು ಎನ್‍ಆರ್‍ಎಸ್ ಆಸ್ಪತ್ರೆ ತಲುಪಿದಾಗ ರಾತ್ರಿ 10 ಗಂಟೆಯಾಗಿತ್ತು, ಆದರೆ ಅಲ್ಲಿಯೂ ಸಹ ನಮಗೆ ಯಾವುದೇ ಪ್ರಯೋಜನವಾಗಲಿಲ್ಲ. ಅಲ್ಲಿಂದ ನೇರವಾಗಿ ನಾವು ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಹೋದರೂ ವೈದ್ಯರು ಮಗುವನ್ನು ದಾಖಲಿಸಿಕೊಳ್ಳಲು ನಿರಾಕರಿಸಿದ್ದರು ಎಂದು ಹೇಳಿದರು.

ಕೊನೆಗೆ ತಡರಾತ್ರಿ 2 ರ ಸುಮಾರಿಗೆ ಎಸ್‍ಎಸ್‍ಕೆಎಂ ಆಸ್ಪತ್ರೆಗೆ ಹೋದೆವು, ಕೂಡಲೇ ಅಲ್ಲಿನ ವೈದ್ಯರುಗಳು ಮಗುವನ್ನು ದಾಖಲಿಸಿಕೊಂಡು ಎಂಡೋಸ್ಕೋಪಿ ಮುಖಾಂತರ ನಾಣ್ಯವನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಆಗ್ರ್ಯ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆ. ನಾನು ಹಾಗೂ ನಮ್ಮ ಕುಟುಂಬವು ಎಸ್‍ಎಸ್‍ಕೆಎಂ ಆಸ್ಪತ್ರೆಯ ವೈದ್ಯರಾದ ಡಾ. ಅರುಣಭ ಸೇನಗುಪ್ತರಿಗೆ ಕೃತಜ್ಞತೆಗಳನ್ನು ಅರ್ಪಿಸುತ್ತೇವೆ. ನಮ್ಮ ಮೊಮ್ಮಗ ತಾಯಿ ಇಲ್ಲದ ತಬ್ಬಲಿ, ನಾನು, ನನ್ನ ಹೆಂಡತಿ ಹಾಗೂ ತಂದೆಯ ಆಶ್ರಯದಲ್ಲಿ ಅವನು ಬೆಳೆಯುತ್ತಿದ್ದಾನೆ ಎಂದು ತಿಳಿಸಿದರು.

ನಾಣ್ಯನುಂಗಿದ್ದ ಮಗುವನ್ನು ಸತತ ನಾಲ್ಕು ಆಸ್ಪತ್ರೆಗಳನ್ನು ತಿರುಗಿ, ಕೊನೆಗೂ ಮಗುವನ್ನು ಉಳಿಸಿಕೊಳ್ಳುವಲ್ಲಿ ಪೋಷಕರು ಯಶಸ್ವಿಯಾಗಿದ್ದಾರೆ. ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡದ ಆಸ್ಪತ್ರೆಗಳು, ಕೇವಲ ಉಪಕರಣಗಳ ಕೊರತೆಯಿಂದ ಸಾಗಾಕಿರುವುದು ಶೋಚನೀಯ ಸಂಗತಿಯಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

Comments

Leave a Reply

Your email address will not be published. Required fields are marked *