ಪುರಾತನ ಕಾಲದ 2 ಲಕ್ಷ ನಾಣ್ಯ ಹರಾಜು ಮಾಡಲು ಮುಂದಾದ ನಾಣ್ಯಶಾಸ್ತ್ರಜ್ಞ

– 20 ವರ್ಷದಿಂದ 8 ಲಕ್ಷ ನಾಣ್ಯ ಸಂಗ್ರಹ
– ಕೊರೊನಾ ಪರಿಹಾರ ನಿಧಿಗಾಗಿ ಮಾರಾಟ

ಭುನವೇಶ್ವರ: ಇಡೀ ದೇಶವೇ ಕೊರೊನಾದಿಂದ ತತ್ತರಿಸಿ ಹೋಗಿದೆ. ಇದರಿಂದ ಬಡವರು, ನಿರ್ಗತಿಕರು ಮತ್ತು ಕೂಲಿ ಕಾರ್ಮಿಕರು ಪರದಾಡುತ್ತಿದ್ದಾರೆ. ಈಗಾಗಲೇ ಅನೇಕರು ಕೊರೊನಾ ವಿರುದ್ಧ ಹೋರಾಟಕ್ಕೆ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಇದೀಗ ಒಡಿಶಾದ ಪ್ರಸಿದ್ಧ ನಾಣ್ಯಶಾಸ್ತ್ರಜ್ಞ ಕೊರೊನಾ ಪರಿಹಾರ ನಿಧಿಗೆ ಸಹಾಯ ಮಾಡಲು ತಾವು ಸಂಗ್ರಹಿಸಿರುವ ಪುರಾತನ ನಾಣ್ಯಗಳನ್ನು ಮಾರಾಟ ಮಾಡಲು ನಿರ್ಧರಿಸಿದ್ದಾರೆ.

27 ವರ್ಷದ ನಾಣ್ಯಶಾಸ್ತ್ರಜ್ಞ ಡೆಬಿ ಪ್ರಸಾದ್ ಮಂಗರಾಜ್ ನಾಣ್ಯ ಮಾರಾಟ ಮಾಡಲು ಮುಂದಾಗಿದ್ದಾರೆ. ಇವರು ಒಡಿಶಾದಲ್ಲಿ ನಾಣ್ಯಗಳ ಸಂಗ್ರಹದ ಮೂಲಕ ಖ್ಯಾತಿ ಗಳಿಸಿದ್ದಾರೆ. ಚಕ್ರವರ್ತಿಗಳಾದ ಅಶೋಕ, ಚಂದ್ರಗುಪ್ತ ಮೌರ್ಯ ಮತ್ತು ಮರಾಠ ರಾಜ ಶಿವಾಜಿ ಅವರ ಕಾಲಕ್ಕೆ ಸೇರಿದ 8 ಲಕ್ಷಕ್ಕೂ ಹೆಚ್ಚು ಹಳೆಯ ನಾಣ್ಯಗಳನ್ನು ಸಂಗ್ರಹಿಸಿದ್ದಾರೆ. ಅದರಲ್ಲಿ ಕನಿಷ್ಠ 2 ಲಕ್ಷ ನಾಣ್ಯವನ್ನು ಹರಾಜು ಮಾಡಲು ನಿರ್ಧರಿಸಿದ್ದಾರೆ.

ಮಂಗರಾಜ್ ಸುಮಾರು 20 ವರ್ಷಗಳಿಂದ ಪುರಾತನ ನ್ಯಾಣಗಳನ್ನು ಸಂಗ್ರಹಿಸಲು ಪ್ರಾರಂಭಿಸಿದ್ದರು. ಆದರೆ ಇದೀಗ ಕೊರೊನಾ ವಿರುದ್ಧ ಹೋರಾಡಲು ಪಿಎಂ ಕೇರ್ಸ್ ನಿಧಿಗೆ ಮತ್ತು ಒಡಿಶಾ ಸರ್ಕಾರದ ಸಿಎಂ ಪರಿಹಾರ ನಿಧಿಗೆ ಹಣ ನೀಡಲು ಮುಂದಾಗಿದ್ದಾರೆ.

ಈ ಬಗ್ಗೆ ಮಾತನಾಡಿದ ನಾಣ್ಯಶಾಸ್ತ್ರಜ್ಞ, ಪ್ರತಿದಿನ ನಾನು ಮಾಧ್ಯಮಗಳಲ್ಲಿ ಕೊರೊನಾದಿಂದ ಭಾರತ ಮತ್ತು ಇತರ ದೇಶಗಳಲ್ಲಿ ಹೆಚ್ಚುತ್ತಿರುವ ಸಾವುಗಳು ಬಗ್ಗೆ ನೋಡಿದ್ದೇನೆ. ಈಗ ದೇಶ ತುಂಬಾ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ. ಆದ್ದರಿಂದ ನಾನು ಇಂತಹ ಸಮಯದಲ್ಲಿ ಏನಾದರೂ ಮಾಡಬೇಕು ಎಂದು ಯೋಚಿಸಿದೆ. ನಾಣ್ಯಗಳನ್ನು ಮಾರಾಟ ಮಾಡುವ ಆಲೋಚನೆ ನನಗೆ ಎಂದಿಗೂ ಬಂದಿರಲಿಲ್ಲ. ಎಲ್ಲಾ ವರ್ಷಗಳಲ್ಲಿ ನಾಣ್ಯಗಳನ್ನು ನಾನೇ ಖರೀದಿಸಿ ಸಂಗ್ರಹಿಸುತ್ತಿದ್ದೆ. ಆದರೆ ಈಗ ಜನರಿಗೆ ಸಹಾಯ ಮಾಡುವುದಕ್ಕಾಗಿ ನಾನು ಅದನ್ನು ಹರಾಜು ಮಾಡಲು ನಿರ್ಧರಿಸಿದ್ದೇನೆ ಎಂದು ಹೇಳಿದರು.

ಮಂಗರಾಜ್ ಈಗ ಮುಂಬೈನಲ್ಲಿರುವ ತಮ್ಮ ಸಹೋದರಿಯೊಂದಿಗೆ ವಾಸಿಸುತ್ತಿದ್ದಾರೆ. ಅವರನ್ನು ನಾಣ್ಯಗಳನ್ನು ಮಾರಾಟ ಮಾಡಲು ಸಂಪರ್ಕಿಸಿದ್ದಾರೆ. ಈಗಾಗಲೇ ನಾಣ್ಯಗಳಿಗೆ ಕೋಟ್ಯಂತರ ರೂಪಾಯಿ ನೀಡಲು ಕೆಲವರು ಮುಂದಾಗಿದ್ದಾರೆ. ಮುಂದಿನ ತಿಂಗಳು ಭುವನೇಶ್ವರದಲ್ಲಿ ಹರಾಜನ್ನು ನಿಗದಿ ಮಾಡಲಾಗಿದೆ. ಆಫ್‍ಲೈನ್‍ನಲ್ಲಿ ಹರಾಜು ನಡೆಯಲಿದೆ.

ನಾಣ್ಯಗಳು:
ಚಕ್ರವರ್ತಿಗಳಾದ ಅಶೋಕ, ಚಂದ್ರಗುಪ್ತ ಮೌರ್ಯ, ಗುಪ್ತಾ ರಾಜವಂಶ ಮತ್ತು ಮರಾಠ ರಾಜ ಶಿವಾಜಿಯ ಕಾಲದಿಂದ ನಾಣ್ಯಗಳನ್ನು ಸಂಗ್ರಹಿಸಿದ್ದಾರೆ. ಅಲ್ಲದೇ ಬ್ರಿಟಿಷ್ ನಾಣ್ಯಗಳ ಪೈಕಿ, ಕಿಂಗ್ ಜಾರ್ಜ್ 5, ಕಿಂಗ್ ಜಾರ್ಜ್ 6 ಮತ್ತು ರಾಣಿ ವಿಕ್ಟೋರಿಯಾ ಆಳ್ವಿಕೆಯಲ್ಲಿ ಹಲವಾರು ನಾಣ್ಯಗಳನ್ನು ಸಂಗ್ರಹಿಸಿದ್ದಾರೆ. ಜೊತೆಗೆ ಅಮೆರಿಕ, ಇಂಗ್ಲೆಂಡ್, ಹಾಂಗ್‍ಕಾಂಗ್, ಬೆಲ್ಜಿಯಂ, ಫ್ರಾನ್ಸ್, ಆಸ್ಟ್ರೇಲಿಯಾ, ಇಟಲಿ, ನೇಪಾಳದ ಲೋಹ ಮತ್ತು ಕಾಗದದ ಕರೆನ್ಸಿಗಳನ್ನು ಸಂಗ್ರಹಿಸಿದ್ದಾರೆ.

ಸುಮಾರು 20 ವಿವಿಧ ದೇಶಗಳ ನಾಣ್ಯಗಳು ಮತ್ತು ಪ್ಲಾಸ್ಟಿಕ್, ಚಿನ್ನ ಮತ್ತು ಇತರ ಅಮೂಲ್ಯ ಲೋಹಗಳಿಂದ ಮಾಡಿದ ನಾಣ್ಯಗಳು ಸಹ ಇವೆ ಎಂದು ಮಂಗರಾಜ್ ತಿಳಿಸಿದ್ದಾರೆ. ಕೊರೊನಾ ವಿರುದ್ಧ ಹೋರಾಡಲು ಸರ್ಕಾರಕ್ಕೆ ಸಹಾಯ ಮಾಡಲು ನಾಣ್ಯಶಾಸ್ತ್ರಜ್ಞ ತಾವು ಸಂಗ್ರಹಿಸಿದ್ದ ಪುರಾತನ ಕಾಲದ ನಾಣ್ಯಗಳನ್ನು ಹರಾಜು ಮಾಡಲು ನಿರ್ಧರಿಸಿದ್ದಾರೆ.

Comments

Leave a Reply

Your email address will not be published. Required fields are marked *