ಮಂಗಳೂರು: ಉದ್ಯಮಿ ಸಿದ್ಧಾರ್ಥ್ ಅವರ ಸಾವಿನ ಸುತ್ತ ಅನುಮಾನದ ಹುತ್ತ ಎದ್ದಿದೆ. ಕಾಫಿ ಕಿಂಗ್ ಸಿದ್ಧಾರ್ಥ್ ಅವರದ್ದು ಸಹಜ ಸಾವೋ? ಅಸಹಜ ಸಾವೋ ಎನ್ನುವ ಪ್ರಶ್ನೆ ಎದ್ದಿದೆ. ಇಂತಹ ಅನುಮಾನಗಳಿಗೆ ಹಲವು ಬೆಳವಣಿಗೆ ಇಂಬು ಕೊಡುತ್ತಿದೆ.
ಸಿದ್ಧಾರ್ಥ್ ಅವರು ಧರಿಸಿದ್ದ ಟೀ ಶರ್ಟ್ ಮಾಯವಾಗಿರುವುದು ಮೊದಲ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಶರ್ಟ್ ಆಗಿದ್ದರೆ ನೀರಿನ ಸೆಳೆತಕ್ಕೆ ಕಿತ್ತು ಹೋಗಿರಬಹುದು ಎಂದು ಹೇಳಬಹುದಿತ್ತು. ಆದರೆ ಅವರು ನಾಪತ್ತೆಯಾದ ಕ್ಷಣದಲ್ಲಿ ಧರಿಸಿದ್ದು ಟೀ ಶರ್ಟ್. ಇದು ಸಾಮಾನ್ಯವಾಗಿ ಕಿತ್ತು ಹೋಗುವುದಿಲ್ಲ. ಆದರೆ ಸಿದ್ಧಾರ್ಥ್ ಅವರ ಮೃತದೇಹವನ್ನು ನೀರಿನಿಂದ ಹೊರಗೆ ತಂದಾಗ ಟೀ ಶರ್ಟ್ ಇರಲಿಲ್ಲ.

ರಕ್ತಸ್ರಾವ: ಸಿದ್ಧಾರ್ಥ್ ಅವರು ನಾಪತ್ತೆಯಾಗಿದ್ದು ಸೋಮವಾರ ಸಂಜೆ 7.30ರ ಆಸುಪಾಸಿನಲ್ಲಿ. ಅವರ ಮೃತದೇಹ ಸಿಕ್ಕಿದ್ದು ಬುಧವಾರ ಬೆಳಗ್ಗೆ 6.30ಕ್ಕೆ. ಅಂದರೆ ಈ ನಡುವಿನ ಅವಧಿ 36 ಗಂಟೆ. ಒಂದು ವೇಳೆ ಸಿದ್ಧಾರ್ಥ್ ಸೋಮವಾರವೇ ನೀರಿಗೆ ಜಿಗಿದಿದ್ದರೆ ಅಥವಾ ಗಾಯಗೊಂಡಿದ್ದರೆ ಇಷ್ಟೊತ್ತಿಗೆ ದೇಹದಲ್ಲಿನ ರಕ್ತವೆಲ್ಲಾ ಸೋರಬೇಕಿತ್ತು. ಆದರೆ ದೇಹವನ್ನು ನೀರಿನಿಂದ ಹೊರ ತೆಗೆದಾಗಲೂ ರಕ್ತಸ್ರಾವ ಆಗುತಿತ್ತು.
ದೇಹ ಊದಿಕೊಂಡಿಲ್ಲ: ಸಾಮಾನ್ಯವಾಗಿ ಮುಳುಗಿ ಸಾವನ್ನಪ್ಪಿದರೆ ನೀರು ದೇಹ ಸೇರುತ್ತದೆ. ನಂತರ ನಿಧಾನವಾಗಿ ಮೃತದೇಹ ಊದಿಕೊಳ್ಳುತ್ತದೆ. ಆದರೆ ಸಿದ್ಧಾರ್ಥ್ ವಿಚಾರದಲ್ಲಿ ಇದಾಗಿಲ್ಲ. ಮೀನುಗಳು ಸಹ ತಿಂದಿಲ್ಲ. ಇಲ್ಲಿ ಗಮನಿಸಬೇಕಾದ ಅಂಶ ಅಂದರೆ, ಸಿದ್ಧಾರ್ಥ್ ನಾಪತ್ತೆಯಾದ ಸ್ಥಳದಿಂದ ನಾಲ್ಕೂವರೆ ಕಿಲೋಮೀಟರ್ ದೂರದಲ್ಲಿ ಮೃತದೇಹ ಪತ್ತೆಯಾಗಿದೆ. ಈ ಪ್ರದೇಶದಲ್ಲಿ ಯಾರು ಶೋಧ ಕಾರ್ಯವನ್ನು ನಡೆಸಿಯೇ ಇರಲಿಲ್ಲ. ಇನ್ನು ಒಂದು ಕಿಲೋಮೀಟರ್ ದೂರ ಹೋದರೆ ಸಮುದ್ರ ಬೇರೆ ಸಿಗುತ್ತಿತ್ತು. ಸಿದ್ಧಾರ್ಥ್ ಮೃತದೇಹ ಸಮುದ್ರ ಪಾಲಾಗಿದ್ದರೆ, ಸಿಗುವ ಸಾಧ್ಯತೆಗಳು ಕಡಿಮೆ ಇದ್ದವು.

ಈ ನಡುವೆ ಸಿದ್ಧಾರ್ಥ್ ಸಾವು ಅಹಜವೋ? ಆತ್ಮಹತ್ಯೆಯೋ? ಎಂಬ ಬಗ್ಗೆ ತನಿಖೆ ನಡೆಸಲು ಮಂಗಳೂರು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮಾರ್ಗದರ್ಶನ ನೀಡಿದ್ದಾರೆ. ಬುಧವಾರ ಸಂಜೆ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ.
ಸಿದ್ಧಾರ್ಥ್ ಅವರ ಮೃತದೇಹದ ಮೇಲೆ ಶರ್ಟ್ ಇರಲಿಲ್ಲ. ಪ್ಯಾಂಟ್ ಜೇಬಲ್ಲಿ ನೋಕಿಯಾ ಮೊಬೈಲ್, ಕೈಯಲ್ಲಿ ಉಂಗುರ ಹಾಗೇ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply