ಬೆಂಗಳೂರಿನಲ್ಲಿ 40 ಕೋಟಿ ಮೌಲ್ಯದ ಕೊಕೇನ್ ಸೀಜ್

– ವಿದೇಶದಿಂದ ಬೆಂಗಳೂರಿಗೆ ಸರಬರಾಜು ಮಾಡುತ್ತಿದ್ದ ಪ್ರಯಾಣಿಕ ಅರೆಸ್ಟ್

ಬೆಂಗಳೂರು: ವಿದೇಶದಿಂದ ಬೆಂಗಳೂರಿಗೆ (Bengaluru) ಸರಬರಾಜು ಮಾಡುತ್ತಿದ್ದ 40 ಕೋಟಿ ಮೌಲ್ಯದ ಕೊಕೇನ್ ಡ್ರಗ್ಸ್ (Cocaine Drugs) ಅನ್ನು ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ (Kempegowda Airport) ಸೀಜ್ ಮಾಡಲಾಗಿದೆ.

40 ಕೋಟಿ ಮೌಲ್ಯದ 4 ಕೆಜಿ ಕೊಕೇನ್ ಅನ್ನು ಡಿಆರ್‌ಐ ಅಧಿಕಾರಿಗಳು (DRI Officials) ಸೀಜ್ ಮಾಡಿದ್ದಾರೆ. ಭಾರತ ಮೂಲದ ಪ್ರಯಾಣಿಕನೋರ್ವ ದೋಹಾದಿಂದ ಬೆಂಗಳೂರಿಗೆ ಬಂದಿದ್ದ. ಪ್ರಯಾಣಿಕನ ಬ್ಯಾಗೇಜ್ ಅನ್ನು ಡಿಆರ್‌ಐ ಅಧಿಕಾರಿಗಳು ತಪಾಸಣೆ ನಡೆಸಿದ ವೇಳೆ ಬಳಕೆ ಮಾಡದ ಎರಡು ಸೂಪರ್ ಹೀರೋ ಕಾಮಿಕ್ಸ್/ಮ್ಯಾಗಜೀನ್ಸ್ ಪತ್ತೆಯಾಗಿದೆ. ಇದನ್ನೂ ಓದಿ: ಪ್ರಾಧ್ಯಾಪಕರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ

ಮ್ಯಾಗಜೀನ್ ಕವರ್ ಮೇಲೆ ಸೀಲ್ ಮಾಡಿದ ರೀತಿಯಲ್ಲಿದ್ದ ಕೊಕೇನ್ ಪೌಡರ್ ಪತ್ತೆಯಾಗಿದೆ. ಈ ಹಿನ್ನೆಲೆ ಡಿಆರ್‌ಐ ಅಧಿಕಾರಿಗಳು ಬಿಳಿ ಬಣ್ಣದ ಪೌಡರ್ ಅನ್ನು ಪರೀಕ್ಷೆಗೆ ಒಳಪಡಿಸಿದ್ದಾರೆ. ಪರೀಕ್ಷೆ ವೇಳೆ ಕೊಕೇನ್ ಎಂದು ಪಾಸಿಟಿವ್ ರಿಪೋರ್ಟ್ ಬಂದಿದೆ. ಬಳಿಕ ಡಿಆರ್‌ಐ ಅಧಿಕಾರಿಗಳು ಮ್ಯಾಗಜೀನ್ ಕವರ್ ಮೇಲಿದ್ದ ಕೊಕೇನ್ ಸಂಗ್ರಹಿಸಿ ಸುಮಾರು 4 ಕೆಜಿಯಷ್ಟು ಕೊಕೇನ್ ಜಪ್ತಿ ಮಾಡಿದ್ದಾರೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ 40 ಕೋಟಿ ಮೌಲ್ಯದ ಕೊಕೇನ್ ಅನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಕೊಕೇನ್ ಸಾಗಾಟ ಮಾಡಿದ್ದ ಪ್ರಯಾಣಿಕನನ್ನು ಬಂಧಿಸಿದ್ದಾರೆ. ಎನ್‌ಡಿಪಿಎಸ್ ಆಕ್ಟ್ ಅಡಿಯಲ್ಲಿ ಪ್ರಯಾಣಿಕನನ್ನು ಡಿಆರ್‌ಐ ಅಧಿಕಾರಿಗಳು ಬಂಧಿಸಿದ್ದಾರೆ. ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಿದೆ. ಇದನ್ನೂ ಓದಿ: ಜು.23-26ರವರೆಗೆ ಪ್ರಧಾನಿ ಮೋದಿ ಬ್ರಿಟನ್, ಮಾಲ್ಡೀವ್ಸ್‌ಗೆ ಭೇಟಿ