ಸ್ಕೂಟಿಯಲ್ಲಿ ನಾಗರಹಾವು ಪ್ರತ್ಯಕ್ಷ – ಬಿಡಿ ಭಾಗವನ್ನು ತೆಗೆದು ಕೊನೆಗೂ ಹಿಡಿದ್ರು : ವಿಡಿಯೋ

ಕೋಲಾರ: ಮನೆ ಬಳಿ ನಿಲ್ಲಿಸಿದ್ದ ಸ್ಕೂಟಿಯೊಂದರಲ್ಲಿ ನಾಗರ ಹಾವೊಂದು ಸೇರಿಕೊಂಡು ಜನರನ್ನು ಗಾಬರಿಗೊಳಿಸಿದ ಘಟನೆ ಜಿಲ್ಲೆಯ ಬಂಗಾರಪೇಟೆಯ ಶಾಂತಿ ನಗರದಲ್ಲಿ ನಡೆದಿದೆ.

ಜಿಲ್ಲೆಯ ಬಂಗಾರಪೇಟೆ ಶಾಂತಿ ನಗರದ ನಿವಾಸಿ ಶಿವಾರೆಡ್ಡಿ ಎಂಬವರ ಸ್ಕೂಟಿಯಲ್ಲಿ ಬೃಹತ್ ಗಾತ್ರದ ನಾಗರ ಹಾವೊಂದು ಪತ್ತೆಯಾಗಿದೆ. ವೃತ್ತಿಯಲ್ಲಿ ಪತ್ರಕರ್ತರಾಗಿರುವ ಶಿವಾರೆಡ್ಡಿಯವರು ಇಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಸ್ಕೂಟಿ ಬಳಿ ಹೋದಾಗ ಏನೋ ಸದ್ದು ಬರುತ್ತಿರುವುದನ್ನು ಗಮನಿಸಿದ್ದಾರೆ. ಬಳಿಕ ಸೂಕ್ಷ್ಮವಾಗಿ ಆಲಿಸಿ ಕೇಳಿದಾಗ ಹಾವು ಬುಸುಗುಡುತ್ತಿದ್ದ ಸದ್ದು ಬಂದಿದೆ. ಆಗ ಸ್ಕೂಟಿಯಲ್ಲಿ ಹಾವು ಸೇರಿಕೊಂಡಿರುವುದು ಖಚಿತವಾದ ಕೂಡಲೇ ಉರಗ ತಜ್ಞರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

ಸ್ಥಳಕ್ಕೆ ಬಂದ ಪಲವತಿಮ್ಮನಹಳ್ಳಿಯ ಉರಗ ತಜ್ಞ ನದೀಮ್ ಅವರು ಸತತ 2 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದರು. ಕೊನೆಗೆ ಸ್ಕೂಟಿಯ ಬಿಡಿ ಭಾಗಗಳನ್ನು ತೆಗೆದು ಒಳಗಡೆ ಅಡಗಿದ್ದ ನಾಗರ ಹಾವನ್ನು ಹೊರತೆಗೆದಿದ್ದಾರೆ. ಈ ವೇಳೆ ಬುಸುಗುಡುತ್ತ ಹಿಡಿಯಲು ಬಂದಿದ್ದ ಉರಗ ತಜ್ಞರನ್ನೇ ಹೆದರಿಸಲು ನಾಗರ ಹಾವು ಪ್ರಯತ್ನಿಸಿದೆ.

ಹಾವು ಬುಸುಗುಡುತ್ತಿದ್ದರೂ ಧೈರ್ಯ ಮಾಡಿ ಬಹಳ ಕಷ್ಟಪಟ್ಟು ನದೀಮ್ ಅವರು ನಾಗರ ಹಾವನ್ನು ರಕ್ಷಣೆ ಮಾಡಿದ್ದಾರೆ. ಬಳಿಕ ಸುರಕ್ಷಿತವಾಗಿ ಹಾವನ್ನು ಕಾಡಿಗೆ ಬಿಟ್ಟು ಬಂದಿದ್ದಾರೆ. ನಾಗರ ಹಾವನ್ನು ನೋಡಲು ಕೆಲಕಾಲ ಸ್ಥಳದಲ್ಲಿ ಜನರು ಮುಗಿಬಿದ್ದು ನಿಂತಿದ್ದರು.

https://www.youtube.com/watch?v=6LmpsAxY6ls

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *