ಸಮುದ್ರದಲ್ಲಿ ಕೊಚ್ಚಿ ಹೋಗ್ತಿದ್ದ ಸೇನಾ ಸಿಬ್ಬಂದಿಯ ರಕ್ಷಣೆ

ಪಣಜಿ: ಸಮುದ್ರದ ಅಲೆಗಳಿಗೆ ಸಿಲುಕಿ ಕೊಚ್ಚಿ ಹೋಗುತ್ತಿದ್ದ ಸೇನಾ ಸಿಬ್ಬಂದಿಯನ್ನು ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಮೂಲಕ ರಕ್ಷಣೆ ಮಾಡಲಾಗಿದೆ.

ಪುಣೆ ಮೂಲದ ಸೇನಾ ಸಿಬ್ಬಂದಿಯೊಬ್ಬರು ರಜೆಗೆಂದು ಗೋವಾ ಪ್ರವಾಸ ಕೈಗೊಂಡಿದ್ದರು. ಹೀಗೆ ದಕ್ಷಿಣ ಗೋವಾ ಜಿಲ್ಲೆಯ `ಕಬೋ ಡ ರಾಮ ಕೋಟೆ’ಯ ಬಳಿ ನಡೆದು ಸಾಗುವಾಗ ಕಾಲು ಜಾರಿ ಸಮುದ್ರದಕ್ಕೆ ಬಿದ್ದಿದ್ದಾರೆ. ಬೀಚ್‍ಗಳಲ್ಲಿ ಜನರು ಸಮುದ್ರಪಾಲಾದರೆ ಅವರ ರಕ್ಷಣೆ ಮಾಡಲೆಂದೇ `ದೃಷ್ಟಿ ಲೈಫ್ ಸೇವಿಂಗ್ ಸಂಸ್ಥೆ’ಯು ಲೈಫ್ ಗಾರ್ಡ್ ಗಳನ್ನು ನೇಮಿಸಿದೆ. ಈ ವೇಳೆ ಸೇನಾ ಸಿಬ್ಬಂದಿ ಸಮುದ್ರದ ಅಲೆಗಳಲ್ಲಿ ಕೊಚ್ಚಿ ಹೋಗುತ್ತಿರುವುದನ್ನ ಕಂಡ ಲೈಫ್ ಗಾರ್ಡ್ ಸಿಬ್ಬಂದಿ ಅವರನ್ನು ರಕ್ಷಿಸಲು ತಕ್ಷಣವೇ ನೀರಿಗೆ ಹಾರಿದ್ದಾರೆ. ಆದರೆ ಅಲೆಗಳ ಸೆಳೆತ ಹೆಚ್ಚಾಗಿದ್ದರಿಂದ ಅವರನ್ನು ಆ ಕ್ಷಣ ರಕ್ಷಿಸಲು ಸಾಧ್ಯವಾಗಲಿಲ್ಲ.

ಬಳಿಕ ಕೋಸ್ಟಲ್ ಗಾರ್ಡ್ ಹೆಲಿಕಾಪ್ಟರನ್ನು ಸ್ಥಳಕ್ಕೆ ಕರೆಸಿ, ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು. ಸಮುದ್ರದಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಸೇನಾ ಸಿಬ್ಬಂದಿಯನ್ನು ಹೆಲಿಕಾಪ್ಟರ್ ಮೂಲಕ ಪತ್ತೆ ಹಚ್ಚಿ ರಕ್ಷಣೆ ಮಾಡಲಾಗಿದೆ. ನಂತರ ಅವರನ್ನು ಹತ್ತಿರದ ಕೋಸ್ಟಲ್ ಗಾರ್ಡ್ ಏರ್ ಎನ್‍ಕ್ಲೇವ್‍ಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಲಾಯಿತು. ಆ ಮೇಲೆ ಹೆಚ್ಚಿನ ಚಿಕಿತ್ಸೆಗಾಗಿ ಐನ್‍ಎಸ್‍ಹೆಚ್ ಜೀವಂತಿ ಆಸ್ಪತ್ರೆಗೆ ಅವರನ್ನು ರವಾನಿಸಲಾಯಿತು.

ಸೇನಾ ಸಿಬ್ಬಂದಿಯನ್ನು ಸಮುದ್ರದಲ್ಲಿ ಹೆಲಿಕಾಪ್ಟರ್ ಮೂಲಕ ರಕ್ಷಣೆ ಮಾಡಿರುವ ವಿಡಿಯೋವನ್ನು ಸುದ್ದಿ ಸಂಸ್ಥೆಯೊಂದು ಬಿಡುಗಡೆ ಮಾಡಿದ್ದು, ವಿಡಿಯೋದಲ್ಲಿ ಸೇನಾ ಸಿಬ್ಬಂದಿ ಅಲೆಗಳ ಹೊಡೆತಕ್ಕೆ ತತ್ತರಿಸಿ ತನ್ನ ಜೀವ ಉಳಿಸಿಕೊಳ್ಳಲು ಪರದಾಡುತ್ತಿರುವ ದೃಶ್ಯ ಸೆರೆಯಾಗಿದೆ. ಅಲೆಗಳ ಸೆಳೆತ ಜೋರಾಗಿದ್ದ ಕಾರಣಕ್ಕೆ ರಕ್ಷಣಾ ಕಾರ್ಯ ತುಸು ಕಷ್ಟವಾದರೂ ಕೋಸ್ಟ್ ಗಾರ್ಡ್ ಗಳು ಒಂದು ಜೀವವನ್ನು ಉಳಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಹವಾಮಾನ ವೈಪರಿತ್ಯದ ಹಿನ್ನೆಲೆಯಲ್ಲಿ ಗೋವಾದ ಬೀಚ್‍ಗಳಲ್ಲಿ ಕೊಚ್ಚಿ ಹೋಗಿದ್ದ ಮೂವರು ಪ್ರವಾಸಿಗರನ್ನು ಬುಧುವಾರದಂದು ಕೋಸ್ಟ್ ಗಾರ್ಡ್‍ಗಳು ರಕ್ಷಿಸಿದ್ದಾರೆ.

Comments

Leave a Reply

Your email address will not be published. Required fields are marked *