ದೋಸ್ತಿ ಸರ್ಕಾರದ ಸಾಲ ಮನ್ನಾದ ರಹಸ್ಯ ಬಯಲು – ರೈತರ ಅಕೌಂಟ್‍ನಿಂದ ಹಣ ವಾಪಸ್

ಯಾದಗಿರಿ: ಸಾಲ ಮನ್ನಾ ಮಾಡಲಾಗಿದೆ ಎಂದು ಹೋದಲ್ಲಿ ಬಂದಲ್ಲಿ ಗಂಟೆಗಟ್ಟಲೆ ಘೋಷಣೆ ಮಾಡುವ ದೋಸ್ತಿ ಸರ್ಕಾರದ ಬಣ್ಣ ಬಯಲಾಗಿದೆ.

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ರೈತರೊಬ್ಬರ ಖಾತೆಗೆ ಬಂದಿದ್ದ ಸಾಲ ಮನ್ನಾದ ಹಣ, ಹೇಗೆ ಬಂದಿದೆಯೋ ಹಾಗೇ ವಾಪಸ್ ಆಗಿದೆ. ಮುಖ್ಯಮಂತ್ರಿ ಸಾಲ ಮನ್ನಾ ಯೋಜನೆಯಡಿಯಲ್ಲಿ ಲೋಕಸಭಾ ಚುನಾವಣೆಗೂ ಮುನ್ನ ರೈತರ ಖಾತೆಗೆ ಹಣ ಜಮಾ ಆಗಿತ್ತು. ಆದ್ರೆ ಚುನಾವಣೆ ಮುಗಿದ ಬಳಿಕ ರೈತರ ಖಾತೆಯಲ್ಲಿದ್ದ ಹಣ ಇದ್ದಕ್ಕಿದ್ದಂತೆ ಮಾಯವಾಗಿದೆ.

ಜಿಲ್ಲೆಯ ಸುಮಾರು 200 ರೈತರ ಖಾತೆಯ ಹಣ ರಿ ಫಂಡ್ ಆಗಿದೆ ಎಂದು ರೈತ ಮುಖಂಡರು ಆರೋಪಿಸಿದ್ದಾರೆ. ಶಹಾಪುರದ ಸಗರ ಗ್ರಾಮದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾತೆ ಹೊಂದಿದ್ದ ಶಿವಪ್ಪ ಅವರಿಗೆ ಏಪ್ರಿಲ್ ತಿಂಗಳಲ್ಲಿ 43,535 ಹಣ ಜಮಾ ಅಗಿತ್ತು. ಮೇ 23ಕ್ಕೆ ಅಂದರೆ ಲೋಕಸಭಾ ಚುನಾವಣೆಯ ಫಲಿತಾಂಶ ಬಂದ ನಂತರ ರೈತ ಶಿವಪ್ಪ ಅಕೌಂಟ್ ಚೆಕ್ ಮಾಡಿದ ವೇಳೆ ಹಣ ರಿ ಫಂಡ್ ಅಗಿರುವುದು ಬೆಳಕಿಗೆ ಬಂದಿದೆ.

ಇದೇ ರೀತಿ 200 ರೈತರ ಹಣ ರೀಫಂಡ್ ಅಗಿದೆ ಎಂದು ರೈತರು ಆರೋಪಿಸಿದ್ದಾರೆ. ಆದರೆ ಸಗರ ಗ್ರಾಮ ಎಸ್‍ಬಿಐ ಬ್ಯಾಂಕ್ ಅಧಿಕಾರಿಗಳು ಅರ್ಹ ಫಲಾನುಭವಿಗಳ ಪಟ್ಟಿ ಕಳಿಸುವಲ್ಲಿ ಗೊಂದಲವಾಗಿದೆ. ಕೆಲ ರೈತರಿಗೆ ಇರುವ ಸಾಲಕ್ಕಿಂತ ಹೆಚ್ಚಿನ ಹಣ ಅವರ ಖಾತೆಗೆ ಹಣ ಜಮೆ ಅಗಿದ್ದು, ಪರಿಶೀಲನೆ ಬಳಿಕ ಹೆಚ್ಚಿನ ಹಣ ರಿಫಂಡ್ ಅಗಿದೆ ಎನ್ನುತ್ತಾರೆ ಬ್ಯಾಂಕ್ ಅಧಿಕಾರಿಗಳು.

ಈ ಸಂಬಂಧ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ರೈತ ಶಿವಪ್ಪ, ಫೆ.28 ರಂದು 50 ಸಾವಿರ ಹಣ ಬಂದರೆ, ಏಪ್ರಿಲ್ 17 ರಂದು 43,535 ರೂ. ಹಣ ಜಮೆ ಆಗಿತ್ತು. ಆದರೆ ಮೇ 2 ರಂದು 43,535 ರೀಫಂಡ್ ಆಗಿದೆ. ಮೇ 23 ರಂದು ಮತ್ತೆ 50 ಸಾವಿರ ರೀಫಂಡ್ ಆಗಿದೆ. ಒಟ್ಟಿ ನಲ್ಲಿ ಜಮೆಯಾಗಿ 93,535 ಹಣ ರೀಫಂಡ್  ಆಗಿದ್ದು, ಬ್ಯಾಂಕ್ ಮ್ಯಾನೇಜರ್ ಅವರನ್ನು ಕೇಳಿದರೆ ರೀಫಂಡ್ ಯಾಕಾಯ್ತು ಎನ್ನುವುದರ ಬಗ್ಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ನಮಗೆ ಏನು ಗೊತ್ತಿಲ್ಲ ಕಂದಾಯ ಇಲಾಖೆಯನ್ನು ಕೇಳಿ ಎಂದು ಉತ್ತರಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಖಾತೆಗೆ ಮೊದಲ ಬಾರಿಗೆ ಜಮೆಯಾದಾಗ ರೈತರು ಹಣ ತೆಗೆಯಲು ಹೋಗಿದ್ದಾರೆ. ಈ ವೇಳೆ ಹಣ ತೆಗೆಯಲು ಮೇಲಿನ ಅಧಿಕಾರಿಗಳಿಂದ ಸೂಚನೆ ಬರಬೇಕು. ಅಧಿಕಾರಿಗಳಿಂದ ಸೂಚನೆ ಬಂದ ನಂತರ ಹಣ ತೆಗೆಯಲು ಅನುಮತಿ ನೀಡಲಾಗುತ್ತದೆ ಎಂದು ಬ್ಯಾಂಕ್ ಮ್ಯಾನೇಜರ್ ತಿಳಿಸಿದ್ದಾರೆ

ವರದಿ ಕೇಳಿದ ಸಿಎಂ:
ಸಾಲಮನ್ನಾದ ಹಣ ರೈತರ ಖಾತೆಯಿಂದ ವಾಪಸ್ ಆದ ಸುದ್ದಿ ಪ್ರಕಟವಾಗುತ್ತಿದ್ದಂತೆ ಸರ್ಕಾರ ಎಚ್ಚೆತ್ತುಕೊಂಡಿದೆ. ಎಷ್ಟು ಹಣ ವಾಪಸ್ಸಾಗಿದೆ? ಚಾಲ್ತಿ ಸಾಲವೇ ಅಥವಾ ಸುಸ್ತಿ ಸಾಲದ ಹಣವೇ? ಯಾವ ಕಾರಣಕ್ಕೆ ವಾಪಸ್ಸಾಗಿದೆ ಎಂದು ಸರ್ಕಾರ ಮಾಹಿತಿಯನ್ನು ಪಡೆದುಕೊಂಡಿದೆ. ತಕ್ಷಣವೆ ವರದಿ ನೀಡುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದ್ದಾರೆ.

Comments

Leave a Reply

Your email address will not be published. Required fields are marked *