ಅತೃಪ್ತರಿಗೆ ಖೆಡ್ಡಾ ತೋಡಲು ದೋಸ್ತಿಗಳಿಂದ ರಣತಂತ್ರ

ಬೆಂಗಳೂರು: ಸಮ್ಮಿಶ್ರ ಸರ್ಕಾರ ಉರುಳಿಸಿದ ಬಂಡಾಯ ಶಾಸಕರಿಗೆ ಶತಾಯಗತಾಯ ಬುದ್ಧಿ ಕಲಿಸಲೇಬೇಕು ಎಂದು ದೋಸ್ತಿ ನಾಯಕರು ಮುಂದಾಗಿದ್ದಾರೆ. ಹೀಗಾಗಿ ರಾಜೀನಾಮೆ ಕೊಟ್ಟ ಶಾಸಕರ ಕ್ಷೇತ್ರಗಳಲ್ಲಿ ಉಪಚುನಾವಣೆಗೆ ಈಗಲೇ ದೋಸ್ತಿ ಅಭ್ಯರ್ಥಿಗಳ ಆಯ್ಕೆಗೆ ಕಸರತ್ತು ನಡೆಸುತ್ತಿದ್ದಾರೆ.

ಅದರಲ್ಲೂ ಕಾಂಗ್ರೆಸ್-ಜೆಡಿಎಸ್ ಪ್ರಾಬಲ್ಯದ ಹಳೆ ಮೈಸೂರು ಭಾಗದ ಏಳು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲೇಬೇಕು ಅನ್ನೋದು ದೋಸ್ತಿಗಳ ಪ್ಲಾನ್ ಆಗಿದೆ. ಅದಕ್ಕಾಗಿ ಹುಣಸೂರು, ಕೆ.ಆರ್ ಪೇಟೆ, ಯಶವಂತಪುರ, ರಾಜರಾಜೇಶ್ವರಿ ನಗರ, ಮಹಾಲಕ್ಷ್ಮಿ ಲೇಔಟ್, ಕೆ.ಆರ್ ಪುರಂ, ಹೊಸಕೋಟೆ ಹಾಗೂ ಚಿಕ್ಕಾಬಳ್ಳಾಪುರದಲ್ಲಿ ಬಂಡಾಯಗಾರರಿಗೆ ಬಿಸಿ ಮುಟ್ಟಿಸಲೇ ಬೇಕು ಎಂದು ದೋಸ್ತಿಗಳು ಸಿದ್ಧ ಮಾಡಿಕೊಳ್ಳುತ್ತಿದ್ದಾರೆ.

ಮುಂದೆ ಬರುವ ಉಪ ಚುನಾವಣೆಗೆ ಈಗಲೇ ಅಭ್ಯರ್ಥಿ ಆಯ್ಕೆ ಕಸರತ್ತು ಆರಂಭಿಸಿದ್ದು, ಒಳಗೊಳಗೆ ಬಹುತೇಕ ಅಭ್ಯರ್ಥಿಗಳನ್ನು ಅಂತಿಮ ಪಡಿಸಿ ಅಖಾಡಕ್ಕೆ ಇಳಿಸಲು ಸಿದ್ಧತೆಯನ್ನು ದೋಸ್ತಿ ನಾಯಕರು ಆರಂಭಿಸಿದ್ದಾರೆ. ಎಂಟರಲ್ಲಿ ನಾಲ್ಕು ಜೆಡಿಎಸ್ ಅಭ್ಯರ್ಥಿಗಳು ಹಾಗೂ ನಾಲ್ಕು ಕಾಂಗ್ರೆಸ್ ಅಭ್ಯರ್ಥಿಗಳು ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ.

ಯಾರ‍್ಯಾರು ಯಾವ್ಯಾವ ಕ್ಷೇತ್ರ:
1) ಹುಣಸೂರು ಕ್ಷೇತ್ರ: ಜೆಡಿಎಸ್ ಮಾಜಿ ರಾಜ್ಯಾಧ್ಯಕ್ಷ ವಿಶ್ವನಾಥ್ ಕೈ ಕೊಟ್ಟ ಕ್ಷೇತ್ರದಲ್ಲಿ ಕಾಂಗ್ರೆಸ್ ಮಾಜಿ ಶಾಸಕ ಮಂಜುನಾಥ್ ಅಖಾಡಕ್ಕೆ ಇಳಿಯಲಿದ್ದಾರೆ. ಜೆಡಿಎಸ್ ಶಾಸಕರಿದ್ದ ಈ ಕ್ಷೇತ್ರವನ್ನ ಕಾಂಗ್ರೆಸ್‍ಗೆ ಬಿಟ್ಟು ಕೊಡುವುದು ಖಚಿತವಾಗಿದೆ.

2) ಕೆ.ಆರ್.ಪುರಂ ಕ್ಷೇತ್ರ: ಜೆಡಿಎಸ್‍ನ ನಾರಾಯಣ ಗೌಡ ಕೈ ಕೊಟ್ಟ ಈ ಕ್ಷೇತ್ರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಅಖಾಡಕ್ಕೆ ಇಳಿಯುವುದು ಖಚಿತವಾಗಿದೆ. ಲೋಕಸಭಾ ಚುನಾವಣೆಯ ಸೋಲಿನ ನೋವಿನಲ್ಲಿರುವ ನಿಖಿಲ್‍ಗೆ ಕೆ.ಆರ್.ಪೇಟೆ ಉಪ ಚುನಾವಣೆ ಗೆಲುವು ತಂದು ಕೊಡುತ್ತಾ ಕಾದು ನೋಡಬೇಕಾಗಿದೆ.

3) ಯಶವಂತಪುರ ಕ್ಷೇತ್ರ: ಬೆಂಗಳೂರಿನ ಯಶವಂತಪುರ ಕ್ಷೇತ್ರದಲ್ಲಿ ಕಾಂಗ್ರೆಸ್‍ನ ಎಸ್.ಟಿ.ಸೋಮಶೇಖರ್ ಬಂಡಾಯದ ಬಾವುಟ ಹಾರಿಸಿ ರಾಜೀನಾಮೆ ಕೊಟ್ಟಿದ್ದಾರೆ. ಆದರೆ ಇಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಪೈಪೋಟಿ ಇರುವುದರಿಂದ ಕ್ಷೇತ್ರವನ್ನ ಜೆಡಿಎಸ್‍ಗೆ ಕಾಂಗ್ರೆಸ್ ಬಿಟ್ಟು ಕೊಡಲಿದೆ. ಜೆಡಿಎಸ್‍ನ ಜವರಾಯಿಗೌಡ ಇಲ್ಲಿ ಅಭ್ಯರ್ಥಿಯಾಗಲಿದ್ದಾರೆ.

4) ರಾಜರಾಜೇಶ್ವರಿ ಕ್ಷೇತ್ರ: ಕಾಂಗ್ರೆಸ್‍ನ ಮುನಿರತ್ನ ಗೆದ್ದಿದ್ದ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರ ಅವರ ಬಂಡಾಯದಿಂದ ತೆರವಾಗಿದೆ. ಹೀಗಾಗಿ ಕಾಂಗ್ರೆಸ್ ಭದ್ರ ಕೋಟೆ ಅನ್ನಿಸಿಕೊಂಡಿರುವ ಅಲ್ಲಿ ಮಾಜಿ ಶಾಸಕ ಪ್ರಿಯಾ ಕೃಷ್ಣರನ್ನ ಅಖಾಡಕ್ಕೆ ಇಳಿಸಲು ಕಾಂಗ್ರೆಸ್ ಮುಂದಾಗಿದೆ. ಕಾಂಗ್ರೆಸ್ ಮುಖಂಡ ರಾಜಕುಮಾರ್ ಸಹ ಟಿಕೆಟ್ ಆಕಾಂಕ್ಷಿ ಆಗಿದ್ದಾರೆ.

5) ಮಹಾಲಕ್ಷ್ಮಿ ಲೇಔಟ್: ಜೆಡಿಎಸ್‍ನ ಗೋಪಾಲಯ್ಯ ಗೆದ್ದಿದ್ದ ಮಹಾಲಕ್ಷ್ಮಿಲೇಔಟ್ ಕ್ಷೇತ್ರ ಸಹಾ ಕಾಂಗ್ರೆಸ್‍ಗೆ ಒಲಿಯಲಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿನಿಂದ ಸ್ಪರ್ಧಿಸಿದ್ದ ಎನ್‍ಎಸ್ ಯುಐ ರಾಜ್ಯಾಧ್ಯಕ್ಷ ಹಾಗೂ ಡಿ.ಕೆ ಶಿವಕುಮಾರ್ ಪಟ್ಟ ಶಿಷ್ಯ ಮಂಜುನಾಥ್ ಗೌಡ ಈ ಬಾರಿ ಅಖಾಡಕ್ಕೆ ಇಳಿಯೋದು ಖಚಿತವಾಗಿದೆ.

6) ಕೆ.ಆರ್.ಪುರಂ ಕ್ಷೇತ್ರ: ಕಾಂಗ್ರೆಸ್‍ನ ಬೈರತಿ ಬಸವರಾಜು ಗೆದ್ದಿದ್ದ ಈ ಕ್ಷೇತ್ರದಲ್ಲಿ ಉಪ ಚುನಾವಣೆಗೆ ವೇದಿಕೆ ಬಹುತೇಕ ಸಿದ್ಧವಾಗಿದೆ. ಕಾಂಗ್ರೆಸ್ಸಿನಿಂದ ವಕೀಲ ಧನಂಜಯ್ ಹಾಗೂ ಕಾರ್ಪೊರೇಟರ್ ಉದಯ ಕುಮಾರ್ ನಡುವೆ ಸ್ಪರ್ಧೆಯಿದ್ದು, ಇಬ್ಬರಲ್ಲಿ ಒಬ್ಬರು ಶಾಸಕರಾಗುವುದು ಬಹುತೇಕ ಖಚಿತವಾಗಿದೆ.

7) ಹೊಸಕೋಟೆ ಕ್ಷೇತ್ರ: ಕಾಂಗ್ರೆಸ್‍ನ ಎಂ.ಟಿ.ಬಿ ನಾಗರಾಜ್ ಶಾಸಕರಾಗಿದ್ದ ಹೊಸಕೋಟೆ ಕ್ಷೇತ್ರ ಎಂಟಿಬಿ ರಾಜೀನಾಮೆಯಿಂದ ತೆರವಾಗಿದೆ. ಮಾಜಿ ಶಾಸಕ ಮಾಲೂರು ಮಂಜುನಾಥ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಅಖಾಡಕ್ಕೆ ಇಳಿಯಲಿದ್ದಾರೆ. .

8) ಚಿಕ್ಕಬಳ್ಳಾಪುರ ಕ್ಷೇತ್ರ: ಕಾಂಗ್ರೆಸ್‍ನ ಡಾ.ಸುಧಾಕರ್ ರಾಜೀನಾಮೆಯಿಂದ ತೆರವಾಗಲಿರುವ ಈ ಕ್ಷೇತ್ರದಲ್ಲಿ ಜೆಡಿಎಸ್‍ನಿಂದ ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಅಂಜನಪ್ಪ ಹಾಗೂ ಚಿಂತಾಮಣಿ ಮಾಜಿ ಶಾಸಕ ಸುಧಾಕರ್ ಇಬ್ಬರಲ್ಲಿ ಒಬ್ಬರು ಅಭ್ಯರ್ಥಿ ಆಗಲಿದ್ದಾರೆ.

ಹೀಗೆ ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆಗೆ ದೋಸ್ತಿ ನಾಯಕರುಗಳು ಸದ್ದಿಲ್ಲದೆ ಸಿದ್ಧತೆ ನಡೆಸಿದ್ದಾರೆ. ತಮಗೆ ಕೈಕೊಟ್ಟು ಸರ್ಕಾರ ಕೆಡವಿದ ಬಂಡಾಯಗಾರರಿಗೆ ಶತಾಯಗತಾಯ ಸೋಲಿನ ರುಚಿ ತೋರಿಸಲು ದೋಸ್ತಿಗಳು ಮುಂದಾಗಿದ್ದು, ಉಪ ಸಮರದ ಕಾವು ಚುನಾವಣೆ ಘೋಷಣೆಗೆ ಮೊದಲೇ ಏರುವಂತೆ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *