ಹತ್ತೇ ನಿಮಿಷದಲ್ಲಿ ನೆರೆ ಹಾನಿ ಪ್ರದೇಶ ವೀಕ್ಷಿಸಿ ವಾಪಸ್ಸಾದ ಸಿಎಂ

ಚಿಕ್ಕಮಗಳೂರು: ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಕೇವಲ ಹತ್ತೇ ನಿಮಿಷದಲ್ಲಿ ಪ್ರವಾಹ ಪೀಡಿತ ಪ್ರದೇಶ ವೀಕ್ಷಿಸಿ, ಸಂತ್ರಸ್ತರನ್ನು ಮಾತನಾಡಿಸಿ ವಾಪಸ್ಸಾದ ಪ್ರಸಂಗ ಇಂದು ಜಿಲ್ಲೆಯಲ್ಲಿ ನಡೆಯಿತು.

ಭಾರೀ ಮಳೆಯಿಂದಾಗಿ ಮೂಡಿಗೆರೆ ತಾಲೂಕಿನ ಮಲೆಮನೆ ಗ್ರಾಮದ ಜನರ ಜೀವನ ಅಸ್ತವ್ಯಸ್ತವಾಗಿದೆ. ಮಹಾ ಮಳೆಗೆ ಗುಡ್ಡ ಕುಸಿದು 6 ಮನೆ ಹಾಗೂ 2 ದೇವಾಲಯಗಳು ಸಂಪೂರ್ಣ ಕೊಚ್ಚಿ ಹೋಗಿವೆ. ಸದ್ಯ ಸಂತ್ರಸ್ತರು ಪರಿಹಾರ ಕೇಂದ್ರ, ಸಂಬಂಧಿಕರ ಮನೆಯಲ್ಲಿ ಇದ್ದು ಜೀವನ ನಡೆಸುತ್ತಿದ್ದಾರೆ.

ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಸಚಿವ ಸಿ.ಟಿ.ರವಿ, ಸಂಸದೆ ಶೋಭಾ ಕರಂದ್ಲಾಜೆ ಹಾಗೂ ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್ ಅವರು ಸಾಥ್ ನೀಡಿದರು. ಹತ್ತೇ ನಿಮಿಷದಲ್ಲಿ ನೆರೆ ಹಾನಿ ಪ್ರದೇಶ ವೀಕ್ಷಿಸಿ ವಾಪಸ್ ಹೋದ ಸಿಎಂ ಹಾಗೂ ನಾಯಕರ ವಿರುದ್ಧ ಸ್ಥಳೀಯರು ಅಸಮಾಧಾನ ಹೊರ ಹಾಕಿದ್ದಾರೆ.

ಮಲೆಮನೆ ಗ್ರಾಮಕ್ಕೆ ಭೇಟಿ ನೀಡಿದ ಸಿಎಂ ಯಡಿಯೂರಪ್ಪ ಅವರು ದೂರದಲ್ಲೇ ನಿಂತು ನೆರೆ ಹಾನಿ ಪ್ರದೇಶ ವೀಕ್ಷಿಸಿದರು. ಈ ವೇಳೆ ಸಂತ್ರಸ್ತರು ಸಿಎಂ ಬಿಎಸ್‍ವೈ ಮುಂದೆ ಕಣ್ಣೀರಿಟ್ಟರು. ಮನೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿರುವ ಜನರ ಸಮಸ್ಯೆಯನ್ನು ಹೇಳಿಕೊಳ್ಳುತ್ತಿದ್ದಂತೆ ಸಿಎಂ ಅಲ್ಲಿಂದ ಹೊರಟು ಹೋದರು.

ಇದಕ್ಕೂ ಮುನ್ನ ಮಾತನಾಡಿದ ಸಿಎಂ ಯಡಿಯೂರಪ್ಪ ಅವರು, ಮೂಡಿಗೆರೆ ತಾಲೂಕಿನಲ್ಲಿ ಆಗಿರುವ ಅನಾಹುತ ಬೇರೆಲ್ಲೂ ಆಗಿಲ್ಲ. ಇತರೆ ಅಭಿವೃದ್ಧಿ ಕಾಮಗಾರಿ ನಿಂತರೂ ಪರವಾಗಿಲ್ಲ ಸಂತ್ರಸ್ತರಿಗೆ ಸೂರು ಕಲ್ಪಿಸುವುದು ನಮ್ಮ ಮೊದಲ ಆದ್ಯತೆ. ಪ್ರವಾಹ ಪೀಡಿತ ಪ್ರದೇಶಗಳ ಅಭಿವೃದ್ಧಿಗೆ ಕೇಂದ್ರದ ನೆರವಿನ ಜೊತೆಗೆ ರಾಜ್ಯದಿಂದಲೂ ಎಷ್ಟು ಬೇಕಾದರೂ ಹಣ ಕೊಡಲು ಸಿದ್ಧ ಎಂದು ಭರವಸೆ ನೀಡಿದರು.

ನೆರೆ ಕುರಿತು ಚರ್ಚೆ ನಡೆಸಲು ಅಧಿವೇಶನ ಕರೆಯುವಂತೆ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಅಧಿವೇಶನ ಕರೆಯುವುದಕ್ಕೆ ಯಾವುದೇ ಅಭ್ಯಂತರವಿಲ್ಲ, ಅಧಿವೇಶನ ಕರೆದು ಚರ್ಚೆ ಮಾಡುತ್ತೇನೆ ಎಂದರು. ಇದೇ ವೇಳೆ ಖಾತೆಯ ಹಂಚಿಕೆಯಲ್ಲಿ ಸಚಿವ ಸಿ.ಟಿ.ರವಿ ಅವರ ಅಸಮಾಧಾನದ ಬಗ್ಗೆ ಪ್ರಶ್ನೆ ಕೇಳುತ್ತಿದ್ದಂತೆ ಮಾಧ್ಯಮಗಳ ವಿರುದ್ಧ ಕಿಡಿಕಾರಿದ ಸಿಎಂ, ನಾನು ಬಂದಿರುವುದು ನೆರೆ ವೀಕ್ಷಣೆಗೆ ಖಾತೆ ಹಂಚಿಕೆ ವಿಚಾರಕ್ಕಲ್ಲ ಎಂದು ಹೇಳಿದರು.

Comments

Leave a Reply

Your email address will not be published. Required fields are marked *