ನೂತನ ಸಚಿವರಿಗೆ ಸಿಎಂ ಯಡಿಯೂರಪ್ಪ ಕ್ಲಾಸ್

ಬೆಂಗಳೂರು: ಪ್ರಮಾಣ ವಚನ ಸ್ವೀಕರಿಸಿದ ನೂತನ 10 ಮಂದಿ ಸಚಿವರಿಗೆ ಸಿಎಂ ಯಡಿಯೂರಪ್ಪ ಸಲಹೆಗಳನ್ನು ನೀಡಿದ್ದಾರೆ. ನೂತನ ಸಚಿವರ ಜೊತೆ ಸಂಪುಟ ಕೊಠಡಿಯಲ್ಲಿ ಸಭೆ ನಡೆಸಿದ ಯಡಿಯೂರಪ್ಪ ಆರಂಭದಲ್ಲಿ ಅಭಿನಂದನೆ ತಿಳಿಸಿ ಸರ್ಕಾರ ಮತ್ತು ಪಕ್ಷದಲ್ಲಿ ಯಾವ ರೀತಿ ಇರಬೇಕೆಂಬ ಬಗ್ಗೆ ಸಿಎಂ ಪಾಠ ಮಾಡಿದ್ದಾರೆ.

ನಿಮ್ಮನ್ನು ಮಂತ್ರಿ ಮಾಡುತ್ತೇನೆ ಎಂದು ಹೇಳಿದ ಭರವಸೆಯನ್ನು ಈಡೇರಿಸಿದ್ದೇನೆ. ಆದರೆ ಖಾತೆಗಾಗಿ ನೀವು ಸ್ವಲ್ಪ ಕಾಯಬೇಕು. ಖಾತೆಗಳ ಬಗ್ಗೆ ಮಾಧ್ಯಮಗಳ ಮುಂದೆ ಬೇಡಿಕೆ ಇಡಬೇಡಿ. ಹೈಕಮಾಂಡ್ ಜೊತೆ ಚರ್ಚಿಸಿ ಖಾತೆಗಳನ್ನು ಅಂತಿಮಗೊಳಿಸುತ್ತೇನೆ ಎಂದು ಹೇಳಿದ್ದಾರೆ.

ಖಾತೆಗಳು ಹಂಚಿಕೆ ನಾಳೆ ಆಗಬಹುದು, ಎರಡ್ಮೂರು ದಿನ ಆಗಲೂಬಹುದು. ಖಾತೆಗಳಿಗಾಗಿ ತಾಳ್ಮೆಯಿಂದ ಕಾಯಿರಿ ಎಂದು ಸಿಎಂ ಸೂಚನೆ ನೀಡಿದ್ದಾರೆ. ಯಡಿಯೂರಪ್ಪನವರ ಈ ಎಚ್ಚರಿಕೆಯ ಸಂದೇಶಕ್ಕೆ ಆಯ್ತು ಎಂದು ನೂತನ ಸಚಿವರು ಸಮ್ಮತಿ ನೀಡಿದ್ದಾರೆ.

ನೂತನ ಸಚಿವರಾಗಿ 10 ಮಂದಿ ಇಂದು ರಾಜಭವನದ ಗಾಜಿನ ಮನೆಯಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಜ್ಯಪಾಲ ವಿ.ಆರ್.ವಾಲಾ ಅವರು, ಎಸ್.ಟಿ ಸೋಮಶೇಖರ್, ರಮೇಶ್ ಜಾರಕಿಹೊಳಿ, ಆನಂದ್ ಸಿಂಗ್, ಡಾ.ಕೆ ಸುಧಾಕರ್, ಬೈರತಿ ಬಸವರಾಜು, ಶಿವರಾಮ್ ಹೆಬ್ಬಾರ್, ಬಿ.ಸಿ ಪಾಟೀಲ್, ಕೆ. ಗೋಪಾಲಯ್ಯ, ನಾರಾಯಣ ಗೌಡ, ಶ್ರೀಮಂತ ಪಾಟೀಲ್ ಪ್ರಮಾಣ ವಚನ ಬೋಧಿಸಿದರು. 10 ಮಂದಿಯೂ ಕ್ಯಾಬಿನೆಟ್ ದರ್ಜೆ ಸಚಿವರಾಗಿ ಯಡಿಯೂರಪ್ಪ ಸಂಪುಟದಲ್ಲಿ ಮುಂದುವರಿಯಲಿದ್ದಾರೆ.

Comments

Leave a Reply

Your email address will not be published. Required fields are marked *