ಪ್ರವಾಹ ವರದಿಯನ್ನು ಕೇಂದ್ರ ತಿರಸ್ಕಾರ ಮಾಡೇ ಇಲ್ಲ- ಸಿಎಂ ಬಿಎಸ್‍ವೈ

ಬೆಳಗಾವಿ: ರಾಜ್ಯದ ಪ್ರವಾಹ ಪರಿಹಾರದ ವರದಿಯನ್ನು ಕೇಂದ್ರ ತಿರಸ್ಕಾರ ಮಾಡಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಸ್ಪಷ್ಟನೆ ನೀಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ರಾಜ್ಯದ ಪ್ರಸ್ತಾಪ ಹಾಗೂ ಕೇಂದ್ರ ತಂಡದ ವರದಿ ಹೊಂದಾಣಿಕೆ ಆಗುತ್ತಿಲ್ಲ. ಈ ಕಾರಣಕ್ಕೆ ಪರಿಶೀಲಿಸಬೇಕಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಇದಕ್ಕಾಗಿ ನಮ್ಮ ಇಬ್ಬರು ಅಧಿಕಾರಿಗಳನ್ನು ದೆಹಲಿಗೆ ಕಳುಹಿಸಲಾಗಿದೆ ಎಂದರು.

ಈ ದೇಶದಲ್ಲಿ ಅನೆಕ ರಾಜ್ಯಗಳ ಪರಿಸ್ಥಿತಿ ಹೀಗೆ ಇದೆ. ನಾವೂ ಬಜೆಟ್ ನಲ್ಲಿ ಹಣ ನೀಡುವ ಮೂಲಕ ಎಲ್ಲ ಇಲಾಖೆಯಿಂದ ಪರಿಹಾರ ಕೊಡಲಾಗುವುದು. ದೇಶದಲ್ಲಿ ನಮ್ಮ ರಾಜ್ಯದಲ್ಲಿ ಅತೀ ಹೆಚ್ಚು ಹಾನಿಯಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‍ಡಿಆರ್ ಎಪ್‍) ನಿಂದ ಹೆಚ್ಚಿನ ಪ್ರಮಾಣದಲ್ಲಿ ಹಣ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

ಕೇಂದ್ರ ಸರ್ಕಾರ ರಾಜ್ಯದ ವರದಿಯನ್ನು ತಿರಸ್ಕರಿಸಿದೆ ಎಂಬುದು ಸುಳ್ಳು. ಈಗಾಗಲೇ ಕೇಂದ್ರದ ಎಲ್ಲ ಸಚಿವರೊಂದಿಗೆ ಮಾತನಾಡಿದ್ದೇನೆ. ಮೂರ್ನಾಲ್ಕು ದಿನಗಳಲ್ಲಿ ರಾಜ್ಯ ಸರ್ಕಾರಕ್ಕೆ ಕೇಂದ್ರದ ಪರಿಹಾರ ಹಣ ಬಿಡುಗಡೆ ಆಗಲಿದೆ ಎಂದು ಭರವಸೆ ನೀಡಿದರು.

ದೇಶದ ಯಾವ ಪ್ರವಾಹಪೀಡಿತ ರಾಜ್ಯಗಳಿಗೆ ಪರಿಹಾರ ಬಿಡುಗಡೆ ಆಗಿಲ್ಲ. ರಾಜ್ಯಕ್ಕೆ ಕೇಂದ್ರದಿಂದ ಹೆಚ್ಚಿನ ಪ್ರಮಾಣದಲ್ಲಿ ಪರಿಹಾರ ಬಿಡುಗಡೆ ಆಗುವ ವಿಶ್ವಾಸ ಇದೆ. ರಾಜ್ಯ ಸರ್ಕಾರದ ಬೊಕ್ಕಸ ಖಾಲಿ ಆಗಿಲ್ಲ. ಖಾಲಿ ಆಗಿದ್ದರೆ ಪ್ರವಾಹ ಪರಿಹಾರಕ್ಕೆ ಇಷ್ಟೊಂದು ಹಣ ನೀಡಲು ಆಗುತ್ತಿರಲಿಲ್ಲ. ಮುಂದಿನ ಬಜೆಟ್ ನಲ್ಲಿ ಪ್ರವಾಹ ಪುನರ್ವಸತಿಗೆ ಹೆಚ್ಚಿನ ಹಣ ಮೀಸಲಿಡುತ್ತೇವೆ ಎಂದರು.

ಇದೇ ವೇಳೆ ಮಧ್ಯಂತರ ಚುನಾವಣೆಯ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಅವರು, ದೇವೇಗೌಡ ಅವರು ಬೇಜವಾಬ್ದಾರಿ ಹೇಳಿಕೆಗಳನ್ನ ಕೊಟ್ಟಿದ್ದಾರೆ. ನಾನು ಯಾರ ಬಗ್ಗೆಯೂ ಟೀಕೆ ಮಾಡಲ್ಲ. ರಾಜ್ಯ ಸರ್ಕಾರದಲ್ಲಿ ಎಲ್ಲ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದೆ. ಎಲ್ಲಿ ಕೆಲಸ ನಿಂತಿದೆ ಅದನ್ನ ತೋರಿಸಲಿ. ಲೂಟಿ ಮಾಡುವವರ ವಿರುದ್ಧ ಕ್ರಮ ತೆಗೆದುಕ್ಕೊಳ್ಳಲಾಗುತ್ತಿದೆ ಎಂದರು.

ಕೇಂದ್ರ ತಿರಸ್ಕಾರ:
ರಾಜ್ಯ ಸರ್ಕಾರ ನೀಡಿದ ನೆರೆ ವರದಿಯನ್ನು ಕೇಂದ್ರ ತಿರಸ್ಕರಿಸಿದೆ. ರಾಜ್ಯ ಸರ್ಕಾರ ಇಷ್ಟು ದಿನ ಸಮಯ ತೆಗೆದುಕೊಂಡ ನೆರೆ ಸ್ಥಳಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಿ ವರದಿಯನ್ನು ಸಿದ್ಧಪಡಿಸಿತ್ತು. ಇತ್ತ ಕೇಂದ್ರ ನೇಮಕ ಮಾಡಿದ್ದ ಅಧಿಕಾರಿಗಳು ಸಹ ಸಮೀಕ್ಷೆ ನಡೆಸಿ ವರದಿಯನ್ನು ಸಿದ್ಧಪಡಿಸಿಕೊಂಡಿದ್ದರು. ಇದೀಗ ರಾಜ್ಯ ನೀಡಿದ ವರದಿಯಲ್ಲಿ ಅಂಕಿ ಅಂಶಗಳು ತಪ್ಪಾಗಿದೆ. ಪ್ರಮಾಣೀಕರಿಸಿ ಮತ್ತೊಮ್ಮೆ ಹೊಸ ವರದಿ ನೀಡಿ ಎಂದು ಕಂದಾಯ ಇಲಾಖೆ ಕಾರ್ಯದರ್ಶಿ ಅನಿಲ್ ಕುಮಾರ್‍ಗೆ ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳು ಸಂದೇಶ ರವಾನಿಸಿದ್ದಾರೆ ಎಂಬುದಾಗಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭ್ಯವಾಗಿತ್ತು.

ಅಲ್ಲದೇ ಕೇಂದ್ರ ತಿರಸ್ಕಾರ ಮಾಡಿದೆ ಎಂದು ಕಾಂಗ್ರೆಸ್ ಕೂಡ ತಮ್ಮ ಆಕ್ರೋಶ ವ್ಯಕ್ತಪಡಿಸಿ ಟ್ವೀಟ್ ಮಾಡಿದೆ. ಕೇಂದ್ರಕ್ಕೆ ಹೆಚ್ಚು ತೆರಿಗೆ ನೀಡುತ್ತಿರುವ ದೇಶದ 4ನೇ ಅತಿ ದೊಡ್ಡ ರಾಜ್ಯ ಕರ್ನಾಟಕ. ನಮ್ಮ ತೆರಿಗೆ ಹಣವನ್ನು ನೆರೆ ಪರಿಹಾರಕ್ಕಾಗಿ ಕೇಳುವುದು ನಮ್ಮ ಹಕ್ಕು. ಸಿಎಂ ಯಡಿಯೂರಪ್ಪ ಅವರು ಮಾತು ಕೊಟ್ಟಂತೆ 3 ದಿನಗಳಲ್ಲಿ ಕೇಂದ್ರದಿಂದ ಪರಿಹಾರ ಬರದೇ ಇದ್ದಲ್ಲಿ ರಾಜ್ಯಾದ್ಯಂತ ‘ಕರ ನಿರಾಕರಣೆ’ ಚಳುವಳಿಗೆ ಕರೆ ನೀಡಲಾಗುವುದು ಎಂದು ಕಾಂಗ್ರೆಸ್ ಎಚ್ಚರಿಕೆ ನೀಡಿದೆ.

Comments

Leave a Reply

Your email address will not be published. Required fields are marked *