ಲಕ್ಕಿ ನಿವಾಸದಲ್ಲೇ ವಾಸ್ತವ್ಯ ಹೂಡಲು ಸಿಎಂ ಚಿಂತನೆ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಮತ್ತದೇ ತಮ್ಮ ಹಳೆ ಸರ್ಕಾರಿ ನಿವಾಸಕ್ಕೆ ಮರಳಲು ನಿರ್ಧರಿಸಿದ್ದು, ನಾಲ್ಕನೇ ಬಾರಿ ಮುಖ್ಯಮಂತ್ರಿಯಾದರೂ ಸಹ ಆ ಮನೆಯನ್ನು ಬಿಡುವುದಿಲ್ಲ ಎಂಬ ನಿರ್ಧಾರವನ್ನು ತಳೆದಿದ್ದಾರೆ.

ಬಿ.ಎಸ್.ಯಡಿಯೂರಪ್ಪನವರು, ಮುಖ್ಯಮಂತ್ರಿಯಾದರೂ ಗೃಹ ಕಚೇರಿ ಕೃಷ್ಣಾದಲ್ಲಿ ನೆಲೆಸದೆ, ತಮ್ಮ ಹಳೇ ರೇಸ್ ಕೋರ್ಸ್ ನಿವಾಸಕ್ಕೇ ಮರಳಲು ನಿರ್ಧರಿಸಿದ್ದಾರೆ. ರೇಸ್ ಕೋರ್ಸ್ ರಸ್ತೆಯಲ್ಲಿರುವ ‘ರೇಸ್ ವ್ಯೂ ಕಾಟೇಜ್’ ನಲ್ಲಿ ವಾಸ್ತವ್ಯ ಹೂಡುವ ಸಾಧ್ಯತೆ ಇದೆ.

ಈ ಹಿಂದೆಯೂ ಸಿಎಂ ಆಗಿದ್ದಾಗ ಯಡಿಯೂರಪ್ಪನವರು ಅದೇ ನಿವಾಸದಲ್ಲಿದ್ದರು. ಅಲ್ಲದೆ, 2004ರಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದಾಗಲೂ ಇದೇ ನಿವಾಸದಲ್ಲಿ ವಾಸವಾಗಿದ್ದರು. ಇದೇ ಮನೆಯಲ್ಲಿಯೇ ಇದ್ದಾಗ ಬಿಎಸ್‍ವೈ ಉಪ ಮುಖ್ಯಮಂತ್ರಿ ಮತ್ತು ಮುಖ್ಯಮಂತ್ರಿ ಗದ್ದುಗೆಯನ್ನು ಏರಿದ್ದರು. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪರಿಗೆ `ರೇಸ್ ವ್ಯೂ ಕಾಟೇಜ್’ ಅದೃಷ್ಟ ಮನೆ ಎಂದು ಹೇಳಲಾಗುತ್ತಿದೆ.

ಈ ಹಿಂದೆ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಎಲ್ಲ ನಾಯಕರಿಗೆ ಸರ್ಕಾರಿ ನಿವಾಸಗಳನ್ನು ಹಂಚಿಕೆ ಮಾಡಿ, ಬಿ.ಎಸ್.ಯಡಿಯೂರಪ್ಪ ಅವರಿಗೆ ರೇಸ್ ಕೋರ್ಸ್ ರಸ್ತೆಯ ನಂಬರ್ 4 ನಿವಾಸವನ್ನು ಹಂಚಿಕೆ ಮಾಡಲಾಗಿತ್ತು. ಇದರಿಂದ ಅಸಮಾಧಾನಗೊಂಡಿದ್ದ ಬಿಎಸ್‍ವೈ, ನಾನು ಕೇಳಿರುವ ನಿವಾಸ ಬಿಟ್ಟು ಬೇರೆ ಬಂಗಲೆಯನ್ನು ನೀಡಲಾಗಿದೆ. ನನಗೆ ಯಾವುದೇ ಸರ್ಕಾರಿ ಬಂಗಲೆ ಬೇಡ ನನ್ನ ಸ್ವಂತ ಮನೆ ಡಾಲರ್ಸ್ ಕಾಲೋನಿಯ ಧವಳಗಿರಿಯಲ್ಲಿಯೇ ವಾಸವಾಗುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಮೈತ್ರಿ ಸರ್ಕಾರದ ಅವಧಿಯಲ್ಲಿ ಯಡಿಯೂರಪ್ಪನವರು ರೇಸ್ ಕೋರ್ಸ್‍ನ ನಂಬರ್ 2 ನಿವಾಸವನ್ನು ನೀಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರವನ್ನು ಬರೆದಿದ್ದರು. ಆದರೆ ಸರ್ಕಾರ ನಂಬರ್ 2 ನಿವಾಸವನ್ನು ಸಚಿವ ಸಾ.ರಾ.ಮಹೇಶ್‍ಗೆ ನೀಡಿ, ಯಡಿಯೂರಪ್ಪನವರಿಗೆ ನಂಬರ್ 4 ನಿವಾಸ ನೀಡಿತ್ತು.

ಲಕ್ಕಿ ಬಂಗಲೆ: ನಂಬರ್ 2 ನಿವಾಸ ಬಿಎಸ್‍ವೈ ಪಾಲಿಗೆ ಲಕ್ಕಿ ಬಂಗಲೆಯಾಗಿದ್ದು, ಈ ಹಿಂದೆ 2004ರಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದಾಗ ಯಡಿಯೂರಪ್ಪ ಇದೇ ನಿವಾಸದಲ್ಲಿ ವಾಸವಾಗಿದ್ದರು. ನಂತರ ಇದೇ ಮನೆಯಲ್ಲಿಯೇ ಇದ್ದಾಗ ಉಪ ಮುಖ್ಯಮಂತ್ರಿ ಮತ್ತು ಸಿಎಂ ಸ್ಥಾನಕ್ಕೆ ಏರಿದ್ದರು. ಈ ಹಿನ್ನೆಲೆಯಲ್ಲಿ ನಂಬರ್ 2 ನಿವಾಸ ರೇಸ್‍ವ್ಯೂವ್ ಕಾಟೇಜ್-2 ಅಂತನೇ ಕರೆಸಿಕೊಳ್ಳುತ್ತದೆ.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಮಾಜಿ ಸಚಿವ ರಮಾನಾಥ್ ರೈ ವಾಸವಾಗಿದ್ದರು. ಸಮ್ಮಿಶ್ರ ಸರ್ಕಾರದ ನಾಯಕರು ಪ್ರತಿಯೊಂದಕ್ಕೂ ಜೋತಿಷ್ಯವನ್ನು ಅವಲಂಭಿಸಿದ್ದ ಕಾರಣ ಸಹಜವಾಗಿಯೇ ಯಡಿಯೂರಪ್ಪನವರಿಗೆ ಈ ಅದೃಷ್ಟದ ಮನೆ ನೀಡಿಲ್ಲ ಎಂಬ ಮಾತುಗಳು ಕೇಳಿ ಬಂದಿದ್ದವು.

Comments

Leave a Reply

Your email address will not be published. Required fields are marked *