ಕಾಲೇಜು ಬಿಟ್ಟು ನಾನೇ ಸಾಲ ತೀರಿಸ್ತಿದ್ದೆ – ಮೃತ ರೈತನ ಪುತ್ರಿಯ ಅಳಲು

– ಮಕ್ಕಳಿಗೆ ಸಿಎಂ ಸರ್ಕಾರಿ ಕೆಲಸದ ಭರವಸೆ
– ಕೆರೆ ವೀಕ್ಷಿಸಿ 5 ಲಕ್ಷ ರೂ. ಪರಿಹಾರ

ಮಂಡ್ಯ: ತಂದೆ ನಮ್ಮ ಬಳಿ ಸಾಲ ಇದೆ ಎಂದು ಹೇಳಿಕೊಂಡಿರಲಿಲ್ಲ. ಒಂದು ವೇಳೆ ಅವರು ಹೇಳಿದ್ದರೆ ನಾನು ಓದುವುದನ್ನು ಬಿಟ್ಟು ಕೆಲಸ ಮಾಡಿ ಸಾಲ ತೀರಿಸುತ್ತಿದ್ದೆ ಎಂದು ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡ ರೈತ ಸುರೇಶ್ ಪುತ್ರಿ ಸುವರ್ಣ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಪುತ್ರಿ ಸುವರ್ಣ, ನಮ್ಮಪ್ಪ ಸಾಲದ ಬಗ್ಗೆ ನಮ್ಮ ಬಳಿ ಹೇಳಿಕೊಂಡಿದ್ದರೆ ನಾನು ಓದುವುದು ಬಿಟ್ಟು ಸಾಲ ತೀರಿಸುತ್ತಿದ್ದೆ. ನಾನೇ ಅವರನ್ನು ಸಾಕುತ್ತಿದ್ದೆ. ಆದರೆ ಯಾವತ್ತೂ ಅವರು ಸಾಲದ ಬಗ್ಗೆ ಹೇಳಿಕೊಂಡಿರಲಿಲ್ಲ. ನಾವು ಧರ್ಮಸ್ಥಳಕ್ಕೆ ಹೋಗಿದ್ದರಿಂದ ನಮ್ಮಪ್ಪ ಸಾವನ್ನ ಒಂದು ವಾರ ಮುಂದೂಡಿದ್ದರು. ಪ್ರತಿದಿನ ನಮಗೆ ಕರೆ ಮಾಡಿ ಮಾತನಾಡುತ್ತಿದ್ದರು ಎಂದು ನೋವಿನಿಂದ ಹೇಳಿದ್ದಾರೆ.

ನಮ್ಮಪ್ಪನ ಬಿಟ್ಟರೆ ನಮಗೆ ಯಾರೂ ದಿಕ್ಕಿಲ್ಲ. ಕುಟುಂಬ ನಿರ್ವಹಣೆಗಾಗಿ ನನ್ನ ಅಣ್ಣನಿಗೆ ಸಿಎಂ ಒಂದು ಕೆಲಸ ಕೊಡಲಿ. ನಮ್ಮಪ್ಪನ ಆಸೆಯಂತೆ ಸಂತೆಬಾಚಹಳ್ಳಿ ಹೋಬಳಿಯ ಕೆರೆಗಳಿಗೆ ಸಿಎಂ ನೀರು ತುಂಬಿಸಲಿ. ನಮ್ಮ ತಂದೆ ಬದುಕಿದ್ದಾಗ ಸಿಎಂ ಅವರು ಬಂದಿದ್ದರೆ ಅಪ್ಪ ತುಂಬಾ ಖುಷಿ ಪಡುತ್ತಿದ್ದರು. ಈಗ ಅವರೇ ನಮಗೆ ದಾರಿ ದೀಪವಾಗಿ ನೋಡಿಕೊಳ್ಳಬೇಕು. ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲಿನ ಬಳಿಕ ನಮ್ಮಪ್ಪ ಸರಿಯಾಗಿ ಮನೆಗೆ ಬರುತ್ತಿರಲಿಲ್ಲ. ಯಾರ ಬಳಿಯೂ ಏನು ಹೇಳಿಕೊಳ್ಳುತ್ತಿರಲಿಲ್ಲ ಎಂದು ಕಣ್ಣೀರು ಹಾಕುತ್ತಾ ಸುವರ್ಣ ಹೇಳಿದ್ದಾರೆ.

ಕರೆ ವೀಕ್ಷಣೆ: ಮೃತ ರೈತನ ಮನವಿಯಂತೆ ಅಘಲಯ ಗ್ರಾಮಕ್ಕೆ ಸಿಎಂ ಆಗಮಿಸಿದ್ದು, ಮೃತ ರೈತ ಸುರೇಶ್ ಕುಟುಂಬ ಭೇಟಿಗೂ ಮುನ್ನ ಅಘಲಯ ಕೆರೆ ವೀಕ್ಷಿಸಿದ್ದಾರೆ. ಸಂತೆಬಾಚಹಳ್ಳಿ ಹೋಬಳಿಯ ಕೆರೆಗಳಿಗೆ ನೀರು ತುಂಬಿಸುವಂತೆ ವಿಡಿಯೋ ಮೂಲಕ ಮನವಿ ಮಾಡಿ ರೈತ ಸುರೇಶ್ ಆತ್ಮಹತ್ಯೆಗೆ ಶರಣಾಗಿದ್ದರು. ಮೃತನ ರೈತನ ಮನವಿಯಂತೆ ಕೆರೆ ತುಂಬಿಸಲು ಬರಡಾಗಿರುವ ಕೆರೆ ವೀಕ್ಷಿಸಿದ್ದಾರೆ.

ಸಿಎಂ ಹೇಳಿಕೆ:
ರಾಜ್ಯದ ಎಲ್ಲಾಕಡೆ ಕೆರೆಗಳನ್ನ ತುಂಬಿಸುವ ಕೆಲಸ ಆಗಬೇಕಿದೆ. ಸುರೇಶ್ ಕೆರೆಗಳನ್ನ ತುಂಬಿಸಿ ಎಂದು ಮನವಿ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯದಲ್ಲೇ 213 ಕೋಟಿ ವೆಚ್ಚದಲ್ಲಿ ಈ ಭಾಗದ 40 -50 ಕೆರೆಗಳನ್ನ ತುಂಬಿಸುವ ಕಾರ್ಯ ಆರಂಭವಾಗಲಿದೆ. ಆತುರ ಪಟ್ಟು ಆತ್ಮಹತ್ಯೆಯ ದಾರಿಯನ್ನ ರೈತರು ಹಿಡಿಯಬಾರದು. ನಾನು ಹಳ್ಳಿಯ ಜನರಿಗೆ ಧೈರ್ಯ ತುಂಬಲು ಗ್ರಾಮ ವಾಸ್ತವ್ಯ ಮಾಡಲು ಮುಂದಾಗಿದ್ದೇನೆ ಎಂದರು.

ನಾನು ಗಿಮಿಕ್‍ಗಾಗಿ ಗ್ರಾಮವಾಸ್ತವ್ಯ ಮಾಡುತ್ತಿಲ್ಲ. ಗಿಮಿಕ್ ಅಂತ ಯಡಿಯೂರಪ್ಪ ಹೇಳುತ್ತಾರೆ. ನಾನು ಎಲ್ಲಾ ಜಿಲ್ಲಾಧಿಕಾರಿಗಳಿಂದ ಗ್ರಾಮಗಳ ಮಾಹಿತಿ ಪಡೆದಿದ್ದೇನೆ. ಗ್ರಾಮ ವಾಸ್ತವ್ಯ ಬೇಡ ಬರಪರಿಹಾರ ಅಧ್ಯಯನ ಮಾಡಿ ಎಂದು ಬಿಜೆಪಿ ಅವರು ಹೇಳುತ್ತಾರೆ. ನಾನು ಸ್ಟಾರ್ ಹೋಟೆಲನ್ನು ನೋಡಿದ್ದೇನೆ, ಸಣ್ಣ ಹಳ್ಳಿಯಲ್ಲೂ ವಾಸ್ತವ್ಯ ಹೂಡಿದ್ದೇನೆ ಎಂದು ಬಿಎಸ್‍ವೈಗೆ ಟಾಂಗ್ ಕೊಟ್ಟಿದ್ದಾರೆ.

ಪರಿಹಾರ: ಮೃತ ಸುರೇಶ್ ಕುಟುಂಬದವರಿಗೆ ಸಿಎಂ 5 ಲಕ್ಷ ಪರಿಹಾರ ನೀಡಿದ್ದಾರೆ. ಅಷ್ಟೇ ಅಲ್ಲದೆ ವಿದ್ಯಾಭ್ಯಾಸ ಮುಗಿದ ಬಳಿಕ ಸುರೇಶ್ ಪುತ್ರಿ ಸುವರ್ಣ ಹಾಗೂ ಪುತ್ರ ಚಂದ್ರಶೇಖರ್ ಗೆ ಸರ್ಕಾರಿ ಕೆಲಸ ಕೊಡಿಸುವ ಭರವಸೆ ನೀಡಿದ್ದಾರೆ. ಸದ್ಯಕ್ಕೆ ಸುವರ್ಣ ಎಂಕಾಂ ದ್ವಿತೀಯ ವರ್ಷ ವ್ಯಾಸಂಗ ಮಾಡುತ್ತಿದ್ದಾರೆ.

Comments

Leave a Reply

Your email address will not be published. Required fields are marked *