ವಿಡಿಯೋ: ಮಂಗ್ಳೂರು ಮೇಯರ್ ಗೆ ಪಂಚ್ ಕೊಟ್ರು ಸಿಎಂ!

ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಮಂಗಳೂರಿಗೆ ಭೇಟಿ ನೀಡಿದ್ದು, ಮೇಯರ್ ಕವಿತಾ ಸನಿಲ್ ಗೆ ಸಖತ್ ಪಂಚ್ ನೀಡಿದ್ದಾರೆ.

ಮಂಗಳೂರಿನ ಮೇಯರ್, ಕರಾಟೆ ಚಾಂಪಿಯನ್ ಕವಿತಾ ಸನಿಲ್ ನೇತೃತ್ವದಲ್ಲಿ ರಾಷ್ಟ್ರ ಮಟ್ಟದ ಕರಾಟೆ ಪಂದ್ಯಾವಳಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲು ಆಗಮಿಸಿದ್ದ ಸಿಎಂ ಸಿದ್ರಾಮಯ್ಯ, ಮಕ್ಕಳು ಕರಾಟೆ ಆಡುವುದನ್ನು ನೋಡಿ ಉತ್ತೇಜಿತರಾದ್ರು. ಹೀಗಾಗಿ ನ್ಯಾಷನಲ್ ಚಾಂಪಿಯನ್ ಮೇಯರ್ ಕವಿತಾ ಸನಿಲ್ ಮೊದಲು ಸಿಎಂಗೆ ಕರಾಟೆ ಪಂಚ್ ನೀಡಿ ಗಮನ ಸೆಳೆದರು. ಮೇಯರ್ ನೀಡಿದ ಪಂಚ್ ಗೆ ತಿರುಗೇಟಾಗಿ ಸಿಎಂ ಕೂಡ ಪಂಚ್ ಮಾಡಿ ನೆರೆದಿದ್ದವರಲ್ಲಿ ನಗೆಯ ಬುಗ್ಗೆ ಉಕ್ಕಿಸಿದ್ರು.

ಇತ್ತೀಚೆಗಷ್ಟೇ ತಮ್ಮ ಅಪಾರ್ಟ್ ಮೆಂಟ್ ಕಾವಲುಗಾರರಾದ ಮೂಲತಃ ಬಾಗಲಕೋಟೆ ಜಿಲ್ಲೆಯ ನಿವಾಸಿಗಳಾದ ಕಮಲ ಮತ್ತು ಪುಂಡಲೀಕ ದಂಪತಿ ಮೇಲೆ ಹಲ್ಲೆಗೈದು ಗೂಂಡಾಗಿರಿ ತೋರಿದ್ದಾರೆ ಎಂದು ಮೇಯರ್ ಕವಿತಾ ಸನಿಲ್ ವಿರುದ್ಧ ಆರೋಪ ಕೇಳಿಬಂದಿತ್ತು. ಅಪಾರ್ಟ್ ಮೆಂಟ್ ಕಾವಲುಗಾರನ ಮನೆಗೆ ಮೇಯರ್ ಏಕಾಏಕಿ ನುಗ್ಗಿ, ಕಾವಲುಗಾರನ ಪತ್ನಿಯ ಜುಟ್ಟು ಹಿಡಿದು ಕಿವಿ ಹಾಗೂ ಮುಖಕ್ಕೆ ಹೊಡೆದಿದ್ದಾರೆ. ಅಲ್ಲದೇ ಅಶ್ಲೀಲ ಭಾಷೆಯಲ್ಲಿ ನಿಂದಿಸಿದ್ದಾರೆಂದು ಮೇಯರ್ ವಾಸವಿರುವ ಮಂಗಳೂರಿನ ಬಿಜೈನ ಅಪಾರ್ಟ್ ಮೆಂಟ್ ಕಾವಲುಗಾರ ದಂಪತಿ ಆರೋಪಿಸಿದ್ದರು.

ಈ ಕುರಿತು ಸಾಮಾನ್ಯ ಸಭೆಯ ವೇಳೆ ಬಿಜೆಪಿ ಕಾರ್ಯಕರ್ತರು ಮೇಯರ್ ರಾಜೀನಾಮೆ ನೀಡುವಂತೆ ಆಕ್ರೋಶ ವ್ಯಕ್ತಪಡಿಸಿದ್ದರು. ಈ ವೇಳೆ ಮೇಯರ್ ತಮ್ಮ ಮೇಲಿನ ಆರೋಪವನ್ನು ಅಲ್ಲಗೆಳೆದಿದ್ದು, ನಾನು ಬೇಕಿದ್ರೆ ಕಟೀಲಿನಲ್ಲಿ ಪ್ರಮಾಣ ಮಾಡ್ತೀನಿ. ಬಿಜೆಪಿಯವರೂ ಅಲ್ಲಿ ಬನ್ನಿ ಅಂತ ಸವಾಲೆಸೆದಿದ್ದರು.

https://www.youtube.com/watch?v=QZy7hqE1yGI

 

Comments

Leave a Reply

Your email address will not be published. Required fields are marked *