ಇಂದು ದೆಹಲಿಗೆ ತೆರಳಲಿರುವ ಸಿಎಂಗೆ ಆರ್. ಅಶೋಕ್ ಕಿವಿಮಾತು

ಬೆಂಗಳೂರು: ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಅವರು ಪ್ರಧಾನಿ ನರೇಂದ್ರ ಮೋದಿ (Narendra Modi) ಭೇಟಿ ಸಾಧ್ಯತೆ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯಗೆ ಪ್ರತಿಪಕ್ಷ ನಾಯಕ ಆರ್ ಅಶೋಕ್ (R Ashok) ಕಿವಿ ಮಾತು ಹೇಳಿದ್ದಾರೆ.

ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅಶೋಕ್, ಕ್ಷುಲ್ಲಕ ರಾಜಕೀಯ ಬದಿಗಿಟ್ಟು, ರಾಜ್ಯದ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಸಿಎಂ ಚರ್ಚಿಸಲಿ ಎಂದು ತಿಳಿಸಿದ್ದಾರೆ.

ಅಶೋಕ್ ಹೇಳಿದ್ದೇನು..?: ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಪ್ರಧಾನಿ ಮೋದಿ ಅವರ ಭೇಟಿಗೆ ಸಮಯ ಸಿಕ್ಕಿರುವಾಗ ತಮ್ಮ ಕ್ಷುಲ್ಲಕ ರಾಜಕೀಯ ಬದಿಗಿಟ್ಟು, ರಾಜ್ಯದ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ, ಕನ್ನಡ ನಾಡಿನ ಆರೂವರೆ ಕೋಟಿ ಜನತೆಯ ಹಿತರಕ್ಷಣೆಯ ದೃಷ್ಟಿಯಿಂದ ಒಬ್ಬ ಜವಾಬ್ದಾರಿಯುತ ಮುಖ್ಯಮಂತ್ರಿಯಾಗಿ ಮಾನ್ಯ ಸಿದ್ದರಾಮಯ್ಯನವರು ತಮ್ಮ ಮುತ್ಸದ್ಧಿತನ ಪ್ರದರ್ಶಿಸಲಿ.

ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರದ ಜೊತೆ ಉತ್ತಮ ಬಾಂಧವ್ಯ ಕಾಯ್ದುಕೊಳ್ಳುವುದು ಒಬ್ಬ ಜವಾಬ್ದರಿಯುತ ಮುಖ್ಯಮಂತ್ರಿಗೆ ಇರಬೇಕಾದ ಪ್ರಮುಖ ಲಕ್ಷಣ ಮಾತ್ರವಲ್ಲ ಅದು ಕರ್ತವ್ಯ ಕೂಡ ಹೌದು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ರಾಜ್ಯದ ಹಿತಾಸಕ್ತಿ ಕಾಪಾಡುವುದಕ್ಕಿಂತ ಪ್ರಧಾನ ಮಂತ್ರಿಗಳ ಮೇಲೆ, ಕೇಂದ್ರ ಸರ್ಕಾರದ ಮೇಲೆ ಇಲ್ಲಸಲ್ಲದ, ರಾಜಕೀಯ ಪ್ರೇರಿತ ಆರೋಪ ಮಾಡುವುದೇ ದೊಡ್ಡ ಕೆಲಸವಾದಂತಿದೆ.

ಮೊನ್ನೆ ಸದನದಲ್ಲಿ ಪ್ರಧಾನಿ ಮೋದಿ (Narendra Modi) ಅವರ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತೋರಿದ ರೋಷಾವೇಶ ಗಮನಿಸಿದರೆ ರಾಜ್ಯದ ಜನತೆಯ ಹಿತರಕ್ಷಣೆಗಿಂತ ತಮ್ಮ ಹೈಕಮಾಂಡ್ ಅನ್ನು ಮೆಚ್ಚಿಸುವುದೇ ಅವರ ಉದ್ದೇಶವೆಂದು ಅನ್ನಿಸುತ್ತದೆ. ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳಿಗೆ ತಮ್ಮದೇ ಆದ ಸಂವಿಧಾನ ಬದ್ಧ ಜವಾಬ್ದಾರಿಗಳಿವೆ. 12 ವರ್ಷಗಳ ಕಾಲ ಒಂದು ರಾಜ್ಯದ ಮುಖ್ಯಮಂತ್ರಿಗಳಾಗಿ ಅತ್ಯಂತ ಯಶಸ್ವಿಯಾಗಿ ಸೇವೆ ಸಲ್ಲಿಸಿರುವ ಪ್ರಧಾನಿ ಮೋದಿ ಅವರಿಗೆ ರಾಜ್ಯ ಸರ್ಕಾರಗಳ ಇತಿಮಿತಿಗಳು, ಅಗತ್ಯತೆಗಳು, ಅಪೇಕ್ಷೆಗಳ ಬಗ್ಗೆ ಇರುವಷ್ಟು ಅರಿವು, ಅವಗಾಹನೆ, ಸಂವೇದನೆ ಬಹುಶಃ ಹಿಂದಿನ ಬೇರೆ ಯಾವ ಪ್ರಧಾನಮಂತ್ರಿಗೂ ಇರಲಿಲ್ಲ ಎಂದು ಅಶೋಕ್ ಬರೆದುಕೊಂಡಿದ್ದಾರೆ.

ಸಿಎಂ ದೆಹಲಿಗೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಕೆಂಪೇಗೌಡ ವಿಮಾನ ನಿಲ್ದಾಣದಿಂದ ಸಂಜೆ 5.15 ಕ್ಕೆ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಇಂದು ಮತ್ತು ನಾಳೆ ಎರಡು ದಿನಗಳ ಕಾಲ ದೆಹಲಿ ಪ್ರವಾಸ ಕೈಗೊಂಡಿದ್ದಾರೆ. ಇಂದು ದೆಹಲಿಯಲ್ಲಿ ವಾಸ್ತವ್ಯ ಹೂಡಲಿರುವ ಸಿಎಂ, ವಿವಿಧ ಇಲಾಖೆ ಕೇಂದ್ರ ಸಚಿವರನ್ನ ಭೇಟಿಯಾಗಲಿದ್ದಾರೆ. ಅಲ್ಲದೇ ಹೈಕಮಾಂಡ್ ನಾಯಕರ ಜೊತೆಗೂ ಚರ್ಚೆ ನಡೆಸುವ ಸಾಧ್ಯತೆಗಳಿವೆ.