‘ಸಾಧನಾ ಸಂಭ್ರಮ’ ಹೆಸರಿನಲ್ಲಿ ಬೀದರ್ ನಲ್ಲಿ ಯಾತ್ರೆಗೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ ಸಿಎಂ

ಬೀದರ್: ಸಿಎಂ ಸಿದ್ದರಾಮಯ್ಯ ಅವರ ಜನಾಶಿರ್ವಾದ ಯಾತ್ರೆ ಇಂದಿನಿಂದ ಆರಂಭವಾಗಲಿದೆ. ಡಿಸೆಂಬರ್ 13 ರಿಂದ ಜನವರಿ 13 ರ ವರೆಗೆ ಒಟ್ಟು ಒಂದು ತಿಂಗಳ ಕಾಲ ಈ ಯಾತ್ರೆ ರಾಜ್ಯಾದ್ಯಂತ ಸಂಚರಿಸಲಿದೆ. ‘ಸಾಧನಾ ಸಂಭ್ರಮ’ ಹೆಸರಿನಲ್ಲಿ ಬೀದರ್ ಜಿಲ್ಲೆಯಲ್ಲಿ ಯಾತ್ರೆಗೆ ಅಧಿಕೃತವಾಗಿ ಸಿಎಂ ಚಾಲನೆ ನೀಡಲಿದ್ದಾರೆ.

ಬೀದರ್ ನಲ್ಲಿ ಒಟ್ಟು 1500 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳು, ಉದ್ಘಾಟನೆಗಳು ಮತ್ತು ಶಂಕುಸ್ಥಾಪನೆಗಳನ್ನು ಇಂದು ನೆರವೇರಲಿವೆ. ಬಸವಕಲ್ಯಾಣ, ಹುಮ್ನಾಬಾದ್ ಹಾಗೂ ಭಾಲ್ಕಿಯಲ್ಲಿ ಸೇರಿದಂತೆ ಒಟ್ಟು ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಸಾಧನಾ ಸಂಭ್ರಮ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿಯಾಗಲಿದ್ದಾರೆ.

ಬೆಳಗ್ಗೆ 9:30ಕ್ಕೆ ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ 10:30ಕ್ಕೆ ಬೀದರ್ ಬಂದು, ನಂತರ 11:30ಕ್ಕೆ ಬಸವಕಲ್ಯಾಣಕ್ಕೆ ಬಂದು, ಚುಳಕಿನಾಲಾ ಜಲಾಶಯದ ಏತ ನೀರಾವರಿ ಯೋಜನೆಯ ಶಂಕುಸ್ಥಾಪನೆ, ಸಭಾ ಭವನ ಕಟ್ಟಡ ಉದ್ಘಾಟನೆ, ಗ್ರಾಮೀಣ ಕುಡಿಯುವ ಯೋಜನೆಗಳ ಶಂಕುಸ್ಥಾಪನೆ ಸೇರಿದಂತೆ ಒಟ್ಟು 264 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.

ಮೊದಲ ಹಂತವಾಗಿ ಇಂದಿನಿಂದ ಒಟ್ಟು 6 ದಿನಗಳ ಕಾಲ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಸಿಎಂ ಸಿದ್ದರಾಮಯ್ಯ ಯಾತ್ರೆ ನಡೆಸಲಿದ್ದಾರೆ. ಡಿಸೆಂಬರ್ 18 ರಂದು ಬಳ್ಳಾರಿ ಜಿಲ್ಲೆಯ ಹೊಸ ಪೇಟೆಯಲ್ಲಿ ಕ್ಯಾಬಿನೆಟ್ ಸಭೆ ಸಹಾ ನಡೆಯಲಿದೆ. ಅಂದು ರಾತ್ರಿ ಸಿಎಂ ಸಿದ್ದರಾಮಯ್ಯ ಬೆಂಗಳೂರಿಗೆ ವಾಪಾಸ್ ಆಗಲಿದ್ದಾರೆ.

ಸಿಎಂ ಈ ಯಾತ್ರೆ ಕಾಂಗ್ರೆಸ್ ಶಾಸಕರು ಅಧಿಕಾರದಲ್ಲಿರುವ 124 ಕ್ಷೇತ್ರದಲ್ಲಿ ಸಂಚರಿಸಲಿದೆ. ಮೊದಲ 6 ದಿನದಲ್ಲಿ ಒಟ್ಟು ಬೀದರ್, ಕೊಪ್ಪಳ, ರಾಯಚೂರು, ಕಲಬುರಗಿ, ಯಾದಗಿರಿ ಹಾಗೂ ಬಳ್ಳಾರಿ ಹೀಗೆ 6 ಜಿಲ್ಲೆಗಳಲ್ಲಿ ಯಾತ್ರೆ ಸಂಚರಿಸಲಿದೆ. ಬಿಜೆಪಿ ಹಾಗೂ ಜೆಡಿಎಸ್ ನಾಯಕರು ವಿಶೇಷ ಬಸ್ ನಲ್ಲಿ ಸಂಚರಿಸಿ ಯಾತ್ರೆ ಮಾಡಿದರೆ ಸಿಎಂ ಸಿದ್ದರಾಮಯ್ಯ ಮಾತ್ರ ಮಾಮೂಲಿ ತಮ್ಮ ಸರ್ಕಾರಿ ಕಾರಿನಲ್ಲೆ ಸಂಚರಿಸಲಿದ್ದಾರೆ.

ವಿಪಕ್ಷಗಳು ಸರ್ಕಾರದ ವಿರುದ್ಧ ಯಾತ್ರೆ ನಡೆಸುತ್ತಿದ್ದು, ಸಿಎಂ ಸಿದ್ದರಾಮಯ್ಯ ಕಳೆದ ನಾಲ್ಕುವರೆ ವರ್ಷದಲ್ಲಿ ಸರ್ಕಾರ ಮಾಡಿದ ಸಾಧನೆ ಮುಂದಿಟ್ಟುಕೊಂಡು ಯಾತ್ರೆ ಹೊರಟಿದ್ದಾರೆ. ಶಂಕುಸ್ಥಾಪನೆ ಹಾಗೂ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ಚಾಲನೆ ನೀಡುತ್ತ ಸರ್ಕಾರದ ವತಿಯಿಂದಲೇ ಸಿಎಂ ತಮ್ಮ ಸಾಧನೆಯನ್ನು ಜನರ ಮುಂದಿಡಲು ಹೊರಟಿದ್ದಾರೆ.

Comments

Leave a Reply

Your email address will not be published. Required fields are marked *