ಕಂಟ್ರಾಕ್ಟರ್‍ಗಳಿಗೆ ಕಿಚಾಯಿಸಿದ ಸಿದ್ದರಾಮಯ್ಯ- ರಸ್ತೆ ಗುಂಡಿಗಳ ಬಗ್ಗೆ ಸಿಎಂ ಪಾಠ

ಬೆಂಗಳೂರು: ಬಿಬಿಎಂಪಿ ಹಾಗೂ ಗುತ್ತಿಗೆದಾರರಿಗೆ ಸಿಎಂ ಸಿದ್ದರಾಮಯ್ಯ ಬಿಸಿ ಮುಟ್ಟಿಸಿದ್ದಾರೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಗುತ್ತಿಗೆದಾರರ ಸಂಘದ ಕಾರ್ಯಕ್ರಮದಲ್ಲಿ ಮಾತಾಡಿದ ಅವರು, ರಸ್ತೆ ಗುಂಡಿ ಬೀಳೋದಕ್ಕೆ ಕಾರಣ ಏನು ಅಂತಾ ಕಂಟ್ರಾಕ್ಟರ್‍ಗಳನ್ನ ಪ್ರಶ್ನೆ ಮಾಡಿದ್ರು. ಅದಕ್ಕೆ ಗುತ್ತಿಗೆದಾರರೆಲ್ಲಾ ಒಮ್ಮೆಲೆ ಮಳೆ ಸಾರ್ ಅಂತಾ ಹೇಳಿದ್ರು. ಮಳೆ ಅಷ್ಟೇ ಅಲ್ಲ. ಕಾಮಗಾರಿಗೂ ಮೊದಲು ಪ್ರಾಪರ್ ಪ್ಲಾನ್ ಮಾಡಲ್ಲ ನೀವು. ಗುಟ್ಟಮಟ್ಟದ ಸಿಮೆಂಟ್, ಕಾಂಕ್ರೀಟ್, ಡಾಂಬರು, ಜೆಲ್ಲಿಕಲ್ಲು ಕೂಡಾ ಬಳಸಲ್ಲ ನೀವು ಅಂತಾ ಕಿಚಾಯಿಸಿದ್ರು.

ವರುಣಾ ನಾಲೆ ಕಾಮಗಾರಿ 18.5 ಕೋಟಿಯಲ್ಲಿ ಆರಂಭವಾಗಿತ್ತು. ಇದೀಗ 700 ರಿಂದ 800 ಕೋಟಿಗೆ ಖರ್ಚು ತಲುಪಿದೆ. ಆದ್ರೂ ಕಾಮಗಾರಿ ಪೂರ್ಣಗೊಂಡಿಲ್ಲ. ಆದಷ್ಟು ಬೇಗ ಕಾಮಗಾರಿಗಳನ್ನ ಪೂರ್ಣಗೊಳಿಸಿ. ನೀವು ಸಾಲ ಮಾಡಿ ಗುತ್ತಿಗೆ ಪಡೆದು ಕಾಮಗಾರಿ ಶುರು ಮಾಡಿರ್ತೀರಿ. ಸ್ವಲ್ಪ ಲಾಭದಲ್ಲಿ ಕೆಲಸ ಮುಗಿಸಿ, ಉತ್ತಮ ಗುಣಮಟ್ಟದ ಕೆಲಸ ಮಾಡಿ ಅಂತಾ ಸಿಎಂ ಹೇಳಿದ್ರು.

ಬೆಂಗಳೂರಲ್ಲಿ ಕಸ ಎತ್ತದ ಗುತ್ತಿಗೆದಾರರಿಗೂ ಸಿಎಂ ಬಿಸಿ ಮುಟ್ಟಿಸಿದ್ರು. ಪ್ರತಿ ವರ್ಷ ದುಡ್ಡು ನೀಡಿದ್ರೂ ಕಸ ಮಾತ್ರ ಅಲ್ಲೇ ಇರುತ್ತೆ. ನಗರದ 1500 ಕಿಮೀ ಹೆಚ್ಚು ರಸ್ತೆಯನ್ನು ವೈಟ್ ಟ್ಯಾಪಿಂಗ್ ರಸ್ತೆ ಮಾಡಲು ತೀರ್ಮಾನಿಸಲಾಗಿದೆ. ಈ ವರ್ಷದಿಂದ ವೈಟ್ ಟ್ಯಾಪಿಂಗ್ ಶುರುವಾಗಿದ್ದು, ಈಗಾಗಲೇ 100 ಕೀಮೀ ವೈಟ್ ಟ್ಯಾಪಿಂಗ್ ಮುಗಿದಿದೆ. ಉತ್ತಮ ಗುಣಮಟ್ಟ ಮತ್ತು ಉತ್ತಮ ಬಾಳಿಕೆ ಬರಲಿ ಅನ್ನೋ ಕಾರಣಕ್ಕೆ ಈ ತೀರ್ಮಾನ ಅಂತ ಸಿಎಂ ಹೇಳಿದ್ರು.

ಇದೇ ವೇಳೆ ಮಾತಾಡಿದ ಸಚಿವ ಜಾರ್ಜ್, ಕೆಟ್ಟ ಗುತ್ತಿಗೆದಾರರನ್ನು ಹೊರಗಿಟ್ಟು ಗುತ್ತಿಗೆದಾರರ ಸಂಘವನ್ನ ಕಟ್ಟಿ ಅಂತಾ ಹೇಳಿದ್ರು. ಬಿಬಿಎಂಪಿಯವರು ಮತ್ತು ಗುತ್ತಿಗೆದಾರರೆಲ್ಲಾ ಸೇರಿ ರಸ್ತೆ ಹಾಳು ಮಾಡ್ತಾರೆ. ಮತ್ತೆ ಅವರೇ ರಿಪೇರಿ ಮಾಡ್ತಾರೆ ಅನ್ನೊ ಮಾತುಗಳು ಕೇಳಿ ಬರ್ತಿವೆ. ಇಂತಹ ಮಾತುಗಳನ್ನು ಸುಳ್ಳಾಗಿಸಿ ಉತ್ತಮ ರೀತಿಯಲ್ಲಿ ಕೆಲಸ ಮಾಡಿ ಅಂತ ಹೇಳಿದ್ರು.

ಸತತ ಮಳೆಯಿಂದಾಗಿ ರಸ್ತೆಗಳು ಹಾಳಾಗಿದ್ದರೂ ಇಂತಹ ಮಾತುಗಳು ಕೇಳಿ ಬರ್ತಿವೆ. ಮಳೆ ನಿಂತ ನಂತರ ರಸ್ತೆ ಗುಂಡಿ ಮುಚ್ಚೋಣ ಅಂದುಕೊಂಡಿದ್ವಿ. ಆದರೆ ಮುಖ್ಯಮಂತ್ರಿಗಳು ಕೂಡಲೆ ಮುಚ್ಚಲು ಸೂಚಿಸಿದ್ದಾರೆ. ಅದರಂತೆ ಗುಂಡಿ ಮುಚ್ಚಲು ಕ್ರಮ ಕೈಗೊಂಡಿದ್ದೇವೆ. ಹಿಂದಿನ ಸರ್ಕಾರಗಳು ನಗರದ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಟ್ಟಿದ್ದರೆ ಇಂತಹ ಸ್ಥಿತಿ ಬರುತ್ತಿರಲಿಲ್ಲ. ನಾವು ನಗರದಲ್ಲಿ ಉತ್ತಮ ಅಭಿವೃದ್ಧಿ ಕಾರ್ಯಗಳನ್ನ ಮಾಡ್ತಿದ್ದೇವೆ ಅಂದ್ರು.

 

Comments

Leave a Reply

Your email address will not be published. Required fields are marked *