ಗ್ಯಾರಂಟಿ ಘೋಷಿಸಿದಾಗ ನಮ್ಮ ವಿರೋಧಿಗಳು ರಾಜ್ಯ ದಿವಾಳಿ ಆಗುತ್ತೆ ಅಂದಿದ್ರು, ಈಗ ರಾಜ್ಯ ಸುಭದ್ರವಾಗಿದೆ: ಸಿಎಂ

ಹಾವೇರಿ: ನಮ್ಮ ವಿರೋಧಿಗಳು ಐದು ಗ್ಯಾರಂಟಿ ಘೋಷಣೆ ಮಾಡಿದಾಗ ರಾಜ್ಯ ದಿವಾಳಿ ಆಗುತ್ತದೆ ಎಂದಿದ್ದರು. ಈಗ ರಾಜ್ಯ ಸುಭದ್ರವಾಗಿದೆ. ಕಳೆದ ಭಾರಿ ಬಜೆಟ್‍ಗಿಂತ 46 ಸಾವಿರ ಕೋಟಿ ರೂ. ಹೆಚ್ಚಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.

ಹಾವೇರಿ ಜಿಲ್ಲೆಯ 411 ಕೋಟಿ ರೂ. ವಿವಿಧ ಅಭಿವೃದ್ಧಿ ಕಾಮಗಾರಿ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದಾರೆ. ಈ ವೇಳೆ, ಆಶಾಕಿರಣ (Ashakiran Scheme) ಯೋಜನೆ ಜಾರಿ ಮಾಡಲಾಗಿದ್ದು, ದೃಷ್ಟಿ ದೋಷ ಇರುವ ಜನರಿಗೆ ಉಚಿತ ಕನ್ನಡಕ ಕೊಡುತ್ತಿದ್ದೇವೆ. ರಾಜ್ಯದ ಜನರಿಗೆ 5 ಗ್ಯಾರಂಟಿ ಯೋಜನೆ ನೀಡಲಾಗಿದೆ. ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಶಂಕುಸ್ಥಾಪನೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಸುಪ್ರೀಂ ಕೋರ್ಟ್ ಹೇಳಿದ ಜಾಗದಲ್ಲಿ ರಾಮಮಂದಿರ ಕಟ್ಟಿಲ್ಲ: ಸಂತೋಷ ಲಾಡ್ ಆರೋಪ

ಇನ್ನೂ ಇದೇ ವೇಳೆ ರೈತರ ಆತ್ಮಹತ್ಯೆ ಪ್ರಕರಣಗಳಿಗೆ ಪರಿಹಾರ ಕೊಡುವುದು ಸಮಸ್ಯೆಯಾಗುತ್ತಿದೆ ಎಂದು ರೈತರು ಅರ್ಜಿ ಸಲ್ಲಿಸಿದ್ದಾರೆ. ಎಫ್‍ಐಆರ್ ಮೇಲೆ ಪರಿಹಾರ ಕೊಡುವ ವ್ಯವಸ್ಥೆ ಮಾಡುವಂತೆ ರೈತ ಸಂಘ ಮನವಿ ಮಾಡಿದೆ. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಮೂರು ತಿಂಗಳಲ್ಲೇ ದಾಖಲೆ ಒದಗಿಸಿ ಕೊಡಲು ಆಗಲ್ಲ, ಪೊಲೀಸರಿಗೆ ಈ ಬಗ್ಗೆ ಹೇಳುತ್ತೇನೆ. ನಾನು ರೈತ, ರೈತರ ಪರವಾಗಿ ಇದ್ದವನು. ರೈತ ಸಂಘದಲ್ಲಿ ಇದ್ದವನು. ರೈತರ ಎಲ್ಲಾ ಸಮಸ್ಯೆಗಳನ್ನು ಪರಿಹಾರ ಮಾಡುತ್ತೇವೆ ಎಂದು ಹೇಳಲು ಆಗಲ್ಲ. ಬಜೆಟ್ ಮೇಲೆ ರೈತರ ಪರವಾಗಿ ಏನು ಮಾಡಬೇಕೋ ಮಾಡುತ್ತೇನೆ. ಹೊಸ ಬೋರ್‌ವೆಲ್‌ಗಳಿಗೆ ವಿದ್ಯುತ್ ಸಂಪರ್ಕ ಕೊಡಲು ಅಧಿಕಾರಿಗಳಿಗೆ ಹೇಳುತ್ತೇನೆ ಎಂದು ಭರವಸೆ ನೀಡಿದ್ದಾರೆ.

ಕಾರ್ಯಕ್ರಮದಲ್ಲಿ ಗೃಹ ಸಚಿವ ಜಿ.ಪರಮೇಶ್ವರ್, ಸಚಿವ ಶಿವಾನಂದ ಪಾಟೀಲ್, ಸಚಿವ ಸತೀಶ್ ಜಾರಕಿಹೊಳಿ, ಬೈರತಿ ಸುರೇಶ್, ದಿನೇಶ್ ಗುಂಡೂರಾವ್, ಸೇರಿದಂತೆ ಗಣ್ಯರು ಪಾಲ್ಗೊಂಡಿದ್ದರು. ಇದನ್ನೂ ಓದಿ: ಸಂಜಯ್‌ ಗಾಂಧಿ ಟ್ರಾಮಾ & ಅಸ್ಥಿ ಚಿಕಿತ್ಸಾ ಕೇಂದ್ರಕ್ಕೆ ಅಂಬುಲೆನ್ಸ್‌ ಉಚಿತ ಕೊಡುಗೆ – ರೋಹನ್‌ ಬೋಪಣ್ಣ ಹಸ್ತಾಂತರ