ಬಕ್ರೀದ್ ಪ್ರಾರ್ಥನೆಯಲ್ಲಿ ಪಾಲ್ಗೊಂಡ ಸಿದ್ದರಾಮಯ್ಯಗೆ ಅಮಾಮ್ ಟೋಪಿ ಹಾಕಿ ಸನ್ಮಾನ

-ಎಲ್ಲರಲ್ಲೂ ಸಹಿಷ್ಣುತೆ ಬರಬೇಕು ಎಂದ ಸಿಎಂ

ಬೆಂಗಳೂರು: ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ (Eidga Maidan Chamarajpet) ನಡೆದ ಬಕ್ರೀದ್ (Bakrid ) ಹಬ್ಬದ ಸಾಮೂಹಿಕ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ಪಾಲ್ಗೊಂಡಿದ್ದರು. ಈ ವೇಳೆ ಮುಸಲ್ಮಾನ ಮುಖಂಡರು ಸಿಎಂಗೆ ಅಮಾಮ್ ಟೋಪಿ ಹಾಕಿ ಹಾಗೂ ಶಾಲನ್ನು ಹೊದಿಸಿ ಸನ್ಮಾನ ಮಾಡಿದ್ದಾರೆ.

ಸನ್ಮಾನ ಸ್ವೀಕರಿಸಿ ಮಾತನಾಡಿದ ಸಿಎಂ, ನೀವೆಲ್ಲರೂ ಮನುಕುಲಕ್ಕೆ ಒಳ್ಳೆಯದಾಗಲಿ ಎಂದು ಪ್ರಾರ್ಥನೆ ಮಾಡಿದ್ದೀರಿ. ಈ ಸಮಯದಲ್ಲಿ ನಾನು ಮುಸ್ಲಿಂ ಬಾಂಧವರಿಗೆ ಬಕ್ರೀದ್ ಹಬ್ಬದ ಶುಭಾಶಯ ಕೋರುತ್ತೇನೆ. ಸಮಾಜದಲ್ಲಿ ನಾವೆಲ್ಲರೂ ಅಣ್ಣ ತಮ್ಮಂದಿರ ರೀತಿ ಬಾಳಬೇಕು. ಇದು ಬಹುತ್ವದ ದೇಶ, ಎಲ್ಲಾ ಭಾಷೆ ಹಾಗೂ ಧರ್ಮಕ್ಕೆ ಸಮಾನತೆ ಕೊಡುವ ದೇಶ. ಮನುಷ್ಯತ್ವ ಬಹಳ ದೊಡ್ಡ ಎಲ್ಲರಲ್ಲೂ ಸಹಿಷ್ಣುತೆ ಬರಬೇಕು. ಇನ್ನೊಂದು ಧರ್ಮವನ್ನು ಪ್ರೀತಿಸುವ ಮನೋಭಾವ ಬೆಳೆಯಬೇಕು. ಆಗ ರಾಷ್ಟ್ರ ಹಾಗೂ ಸಮಾಜದ ಏಳಿಗೆ ಸಾಧ್ಯವಾಗಲಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಹಿಂದಿನಿಂದ ಎಕ್ಸ್‌ಪ್ರೆಸ್ ರೈಲಿಗೆ ಗುದ್ದಿದ ಗೂಡ್ಸ್ ರೈಲು – ಐವರು ದುರ್ಮರಣ, 25 ಮಂದಿಗೆ ಗಾಯ

ನಾವು ಸಂವಿಧಾನದ ಮೇಲೆ ನಂಬಿಕೆ ಇಟ್ಟವರು. ನಾವು ಯಾವುದೇ ರೀತಿಯ ತಾರತಮ್ಯವನ್ನು ಮಾಡುವುದಿಲ್ಲ. ರಾಜ್ಯದ 7 ಕೋಟಿ ಜನರನ್ನು ರಕ್ಷಣೆ ಮಾಡುವ ಜವಾಬ್ದಾರಿ ಸರ್ಕಾರದ್ದು. ಈ ಕೆಲಸವನ್ನು ನಾವು ತಾರತಮ್ಯ ಇಲ್ಲದೇ ಮಾಡುತ್ತೇವೆ. ಅಲ್ಪಸಂಖ್ಯಾತರನ್ನು ಸಮಾನರಾಗಿ ನೋಡುವ ಮನೋಭಾವ ನಮ್ಮದು. ಈ ವರ್ಷ ಒಳ್ಳೆಯ ಮಳೆ ಹಾಗೂ ಬೆಳೆಯಾಗಲಿ ಎಂದು ಆಶಿಸುತ್ತೇನೆ ಎಂದಿದ್ದಾರೆ.

ಈ ವೇಳೆ ಸಚಿವ ಜಮೀರ್ ಅಹಮದ್ ಹಾಗೂ ಮುಸಲ್ಮಾನ ಮುಖಂಡರು ಉಪಸ್ಥಿತರಿದ್ದರು. ಇದನ್ನೂ ಓದಿ: ಟಿಡಿಪಿಯ ಸೂಪರ್‌ ಸಿಕ್ಸ್‌ ಗ್ಯಾರಂಟಿ ಘೋಷಣೆ ಜಾರಿಗೆ ಬೇಕು 60 ಸಾವಿರ ಕೋಟಿ!