ಜಾರ್ಜ್ ಕ್ಷೇತ್ರದ ಅಲ್ಪಸಂಖ್ಯಾತ ಶಾಲೆಗೆ ಕೋಟಿ ಕೋಟಿ ಅನುದಾನ: ಪಬ್ಲಿಕ್ ಟಿವಿ ವರದಿಗೆ ಉತ್ತರಿಸಲು ತಡಬಡಿಸಿದ ಸಿಎಂ

ಬೆಂಗಳೂರು: ಬೆಂಗಳೂರು ಉಸ್ತುವಾರಿ ಸಚಿವ ಜಾರ್ಜ್ ಕ್ಷೇತ್ರದ ಅಲ್ಪಸಂಖ್ಯಾತ ಶಾಲೆಗಳಿಗೆ ಅನುದಾನ ನೀಡಿದ ವಿಚಾರಕ್ಕೆ ಪ್ರತಿಕ್ರಿಯಿಸಲು ಸಿಎಂ ಸಿದ್ದರಾಮಯ್ಯ ನಿರಾಕರಿಸಿದ್ದಾರೆ.

ದಕ್ಷಿಣ ಕನ್ನಡದ ಜಿಲ್ಲೆಯಲ್ಲಿರುವ ಕಲ್ಲಡ್ಕದ ಶಾಲೆಗೆ ನಿಯಮಾವಳಿಗಳ ಹೆಸರಿನಲ್ಲಿ ಕೊಲ್ಲೂರು ದೇವಾಲಯದ ಅನುದಾನವನ್ನು ನಿಲ್ಲಿಸಿದ್ದೀರಿ. ಆದರೆ ಜಾರ್ಜ್ ಕ್ಷೇತ್ರದ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಭಾರೀ ಅನುದಾನ ನೀಡಿದ್ದು ಯಾಕೆ ಎನ್ನುವ ಪಬ್ಲಿಕ್ ಟಿವಿಯ ವರದಿಗೆ ಸಿಎಂ ಸರಿಯಾಗಿ ಪ್ರತಿಕ್ರಿಯೆ ನೀಡದೇ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಗೃಹ ಕಚೇರಿ ಕೃಷ್ಣದಲ್ಲಿ ಮಾತನಾಡಿದ ಅವರು, ಕಲ್ಲಡ್ಕ ಶಾಲೆಗೆ ಅನುದಾನ ವಾಪಸ್ ಪಡೆದಿದ್ದೇವೆ. ಖಾಸಗಿ ಶಿಕ್ಷಣ ಸಂಸ್ಥೆಗೆ ಹಣ ನೀಡಬಾರದು ಎಂದು ವಾಪಸ್ ಪಡೆದಿದ್ದೇವೆ. ಬಿಜೆಪಿ ಅವರಿಗೆ ಬೇರೆ ಆರೋಪ ಮಾಡಲು ವಿಷಯ ಇಲ್ಲದ ಕಾರಣ ಈ ಆರೋಪ ಮಾಡುತ್ತಿದ್ದಾರೆ ಎಂದರು.

ಬಿಜೆಪಿ ನಾಯಕರಿಗೆ ಸಂಸ್ಕಾರ ಇಲ್ಲ. ಮನುಷ್ಯತ್ವ ಇಲ್ಲದವರು ಬಿಜೆಪಿಯವರು. ಅವರ ಲೆವೆಲ್ ಗೆ ಇಳಿದು ನಾನು ಮಾತನಾಡಲು ಸಾಧ್ಯವಿಲ್ಲ. ನನಗೂ ಅ ರೀತಿ ಮಾತನಾಡಲು ಬರುತ್ತದೆ. ಆದರೆ ಸಂಸ್ಕಾರ ಇಲ್ಲದವರ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ. 40 ವರ್ಷ ಸಾರ್ವಜನಿಕ ರಾಜಕಾರಣ ಮಾಡಿದ್ದೇನೆ. ರಾಜ್ಯದ ಮುಖ್ಯಮಂತ್ರಿಯಾಗಿ ನಾನು ಹಾಗೆಲ್ಲ ಮಾತನಾಡುವುದಿಲ್ಲ. ಕೆಟ್ಟ ಭಾಷೆಯನ್ನು ನಾನು ಬಳಸುವುದಿಲ್ಲ. ಇದು ಕರ್ನಾಟಕ ಜನರ ಸ್ವಾಭಿಮಾನದ ಪ್ರಶ್ನೆ. ನಾಡಿನ ಜನ ಅವರಿಗೆ ಪಾಠ ಕಲಿಸುತ್ತಾರೆ ಎಂದು ತಿರುಗೇಟು ನೀಡಿದರು.

ಮೇಯರ್ ಸಮರ್ಥನೆ: ಅರೇಬಿಕ್ ಶಾಲೆಗೆ ಅನುದಾನ ಕೊಟ್ಟ ವಿಚಾರವನ್ನು ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಸಮರ್ಥಿಸಿಕೊಂಡಿದ್ದಾರೆ. ಬಿಎಂಪಿಯಿಂದ ಹಲವಾರು ಸಂಘ ಸಂಸ್ಥೆಗಳಿಗೆ ಈ ಹಿಂದೆ ಸಹ ಅನುದಾನ ನೀಡಲಾಗಿದೆ. ಕಟ್ಟಡಗಳ ನಿರ್ಮಾಣಕ್ಕೆ ಸ್ಮಾರಕಗಳ ನಿರ್ಮಾಣಕ್ಕೆ ಅನುದಾನ ನೀಡಲಾಗುತ್ತದೆ. ಕರಗ ಉತ್ಸವ, ದಸರ ಉತ್ಸವಗಳಿಗೂ ಅನುದಾನ ನೀಡಲಾಗುತ್ತದೆ. ಅದೇ ರೀತಿ ಅನುದಾನ ನೀಡಿದ್ದೇವೆ ಎಂದು ಬಿಬಿಎಂಪಿಯ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ : ಕಲ್ಲಡ್ಕ ಶಾಲೆ ಮಕ್ಕಳ ಊಟಕ್ಕೆ ಕಲ್ಲು- ಅಲ್ಪಸಂಖ್ಯಾತರ ಅರೇಬಿಕ್ ಕಾಲೇಜಿಗೆ ಸರ್ಕಾರದಿಂದ ಹಣದ ಹೊಳೆ

Comments

Leave a Reply

Your email address will not be published. Required fields are marked *