ಸಿದ್ದರಾಮಯ್ಯ ರಾಜೀನಾಮೆ ಪಕ್ಕ – ಅವರ ಪಾಪ ಅವರನ್ನು ಸುಮ್ಮನೆ ಬಿಡಲ್ಲ: ವಿಜಯೇಂದ್ರ

ಬೆಂಗಳೂರು: ಮಹಿಳಾ ದೌರ್ಜನ್ಯದ ಸಂದರ್ಭದಲ್ಲೂ ರಾಜ್ಯ ಕಾಂಗ್ರೆಸ್ ಸರ್ಕಾರ ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ. ಸಿದ್ದರಾಮಯ್ಯ (CM Siddaramaiah) ರಾಜೀನಾಮೆ ಕೊಡ್ತಾರೆ, ಅವರು‌ ಮಾಡಿದ ಪಾಪ ಅವರನ್ನು ಸುಮ್ಮನೆ ಬಿಡಲ್ಲ ಎಂದು ಬಿಜೆಪಿ (BJP) ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (B.Y Vijayendra) ಕಿಡಿಕಾರಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ನಡೆದ ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯ ಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದ ಜನರು ಈ ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ. ವಿಪಕ್ಷವಾಗಿದ್ದಾಗ ಹೋರಾಟಗಳು ಅನಿವಾರ್ಯ, ಚುನಾವಣೆ ಬಂದಾಗ ಮಾತ್ರ ಹೋರಾಟ ಮಾಡಿದರೆ ಅದು ಜನತೆಗೆ ಮಾಡಿದ ಅವಮಾನ ಮತ್ತು ಅನ್ಯಾಯ. ರಾಜ್ಯದ ಚುಕ್ಕಾಣಿ ಹಿಡಿದ ಸರ್ಕಾರ ಜನವಿರೋಧಿ ನೀತಿಗಳನ್ನು ಅನುಸರಿಸುತ್ತದೋ ಆಗ, ರಾಜ್ಯದ ಜನರ ಪರವಾಗಿ ಹೋರಾಡುವುದು ನಮ್ಮ ಕರ್ತವ್ಯ ಎಂದು ಅವರು ಹೇಳಿದ್ದಾರೆ.

ದುಷ್ಟ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮಹಿಳೆಯರ ಮೇಲೆ ನಿರಂತರವಾಗಿ ದೌರ್ಜನ್ಯ ಹೆಚ್ಚಾಗಿದೆ. ರಾಜ್ಯದಲ್ಲಿ ವಾಲ್ಮೀಕಿ ನಿಗಮದ ಹಗರಣ, ಮುಡಾ ಹಗರಣದ ವಿರುದ್ಧ ಹೋರಾಟಗಳು ನಡೆದಿವೆ. ಮಹಿಳೆಯರ ಮೇಲಿನ ದೌರ್ಜನ್ಯದ ಸಂದರ್ಭದಲ್ಲಿ ಮುಖ್ಯಮಂತ್ರಿ, ಗೃಹ ಸಚಿವ, ಸಚಿವರ ನಡವಳಿಕೆ ಪ್ರಮುಖವಾಗುತ್ತದೆ ಎಂದಿದ್ದಾರೆ.

ಈ ಸರ್ಕಾರ ಬಂದ ಬಳಿಕ ಅಭಿವೃದ್ಧಿ ಆರಂಭವೇ ಆಗಿಲ್ಲ. ಅಭಿವೃದ್ಧಿ ಕಾರ್ಯಗಳಿಗೆ ಇವರು ಚಾಲನೆಯನ್ನೇ ಕೊಟ್ಟಿಲ್ಲ. ಮಹಿಳೆಯರಿಗೆ ಗೃಹಲಕ್ಷ್ಮಿ ಎಂದರು. ಲೋಕಸಭಾ ಚುನಾವಣೆ ಬಂದಿತ್ತು. ಮತದಾನಕ್ಕೆ 3-4 ದಿನಗಳ ಮೊದಲು 3 ಕಂತು ಬಿಡುಗಡೆ ಮಾಡಿದ್ದರು. ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಚುನಾವಣೆ ಬಂದಾಗ ಮತ್ತೆ ಕಂತು ಬಿಡುಗಡೆ ಆಗಲಿದೆ. ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಬರದಿದ್ದರೆ ಗ್ಯಾರಂಟಿ ಸ್ಥಗಿತ ಎಂದು ಬೆದರಿಸಿದ್ದರು. ಉಚಿತ ಬಸ್ ಪ್ರಯಾಣದಿಂದ ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಉಚಿತ ಬಸ್ ಪ್ರಯಾಣದ ಹೆಸರಿನಲ್ಲಿ ಮಹಿಳೆಯರ ಮೂಗಿಗೆ ತುಪ್ಪ ಹಚ್ಚಿದ್ದಾರೆ ಎಂದು ಟೀಕಿಸಿದ್ದಾರೆ.

ಪಾದಯಾತ್ರೆ ಬಗ್ಗೆ ಹಿಂದೆ ಕೇಳಿದ್ದೆವು. ಯಡಿಯೂರಪ್ಪ, ಅನಂತಕುಮಾರ್, ವಿ.ಎಸ್.ಆಚಾರ್ಯ ಮೊದಲಾದ ಹಿರಿಯರು ಇಂಥ ಹೋರಾಟದಲ್ಲಿ ಭಾಗವಹಿಸಿದ್ದರು. ಪಾದಯಾತ್ರೆ ಹೋರಾಟ ಎಂದರೆ ಯಡಿಯೂರಪ್ಪ ಅವರು ನೆನಪಾಗುತ್ತಾರೆ. ಕರ್ನಾಟಕದಲ್ಲಿ ಹೋರಾಟ ಎಂದೊಡನೆ ಯಡಿಯೂರಪ್ಪ ಅವರನ್ನು ನೆನಪು ಮಾಡಿಕೊಳ್ಳುತ್ತಾರೆ. ದುಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಪಾದಯಾತ್ರೆ ಎಂದು ಪ್ರಕಟಿಸಿದಾಗ ನಮಗೂ ಆತಂಕ ಇತ್ತು. ತಯಾರಿ ಆಗಿರಲಿಲ್ಲ. 5 ದಿನಗಳಷ್ಟೇ ಬಾಕಿ ಇದ್ದವು. ಪಾದಯಾತ್ರೆ ಆಗಬೇಕೇ ಬೇಡವೇ ಎಂಬ ಗೊಂದಲವೂ ಇತ್ತು. ಕೇಂದ್ರದ ವರಿಷ್ಠರಲ್ಲೂ ಆತಂಕವಿತ್ತು. ಪಾದಯಾತ್ರೆಯು ರಾಜ್ಯದ ಚರಿತ್ರೆಯಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವ ಆಂದೋಲನ ಆಗಲಿದೆ ಎಂದು ವರಿಷ್ಠರಿಗೆ ನಾನು ತಿಳಿಸಿದ್ದೆ ಎಂದಿದ್ದಾರೆ.

ಪಾದಯಾತ್ರೆಯ ಮೊದಲ ದಿನ 8ರಿಂದ 10 ಸಾವಿರ ಜನ, 2ನೇ ದಿನ 10ರಿಂದ 14-15 ಸಾವಿರ ಜನ, 3ನೇ ದಿನ 15ರಿಂದ 18 ಸಾವಿರ ಜನ ಇದ್ದರು. 4ನೇ ದಿನ ಒಂದೇ ದಿನ 25 ಸಾವಿರ ಜನ ಭಾಗಿಯಾಗಿದ್ದರು. ಒಟ್ಟಾರೆಯಾಗಿ ಲಕ್ಷ ಲಕ್ಷ ಸಂಖ್ಯೆಯಲ್ಲಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಆಡಳಿತ ಪಕ್ಷದವರು ಆತಂಕ ಪಟ್ಟುಕೊಂಡು ನಮ್ಮ ಪಾದಯಾತ್ರೆ ಶುರು ಆಗುವುದಕ್ಕೂ ಮೊದಲೇ ಜನಾಂದೋಲನ ಮಾಡಿದ್ದರು.

ಸಿದ್ದರಾಮಯ್ಯನವರು ತಮ್ಮ ರಾಜಕೀಯ ಜೀವನದಲ್ಲಿ ಇಷ್ಟು ಆತಂಕಕ್ಕೆ ಗುರಿ ಮಾಡಿದ ಸಂದರ್ಭ ಯಾವತ್ತೂ ಇರಲಿಲ್ಲ. ಪಾದಯಾತ್ರೆ ವೇಳೆ ಊಟೋಪಚಾರ, ವಸತಿ, ವೈದ್ಯಕೀಯ ಸೇರಿ ಎಲ್ಲ ವ್ಯವಸ್ಥೆಗಳು ವ್ಯವಸ್ಥಿತವಾಗಿ ನಡೆದಿವೆ. ಕೊನೆಯ ದಿನ 70-80 ಸಾವಿರ ಜನರು ಸೇರಿದ್ದರು. ಕೇಂದ್ರದ ಹಿರಿಯರೂ ಸಂತೋಷ ವ್ಯಕ್ತಪಡಿಸಿದ್ದಾರೆ. ಅಮಿತ್ ಶಾ, ನಡ್ಡಾ, ಸಂತೋಷ್ ಅವರು ಈಚಿನ ದಿನಗಳಲ್ಲಿ ಯಾವುದೇ ಒಂದು ಪಕ್ಷ ಇಷ್ಟು ಯಶಸ್ವಿಯಾಗಿ ಹೋರಾಟ ಮಾಡಿರಲಿಲ್ಲ ಎಂದು ಹೇಳಿದ್ದರು. ಪಾದಯಾತ್ರೆಯ ನಂತರದ ಪರಿಣಾಮ ಹೇಗಿದೆ ಎಂದರೆ ಆಟೋ, ಟ್ಯಾಕ್ಸಿ ಚಾಲಕರು ‘ಓಹ್ ವಿಜಯಣ್ಣ ಎಂದು ವಿಷ್ ಮಾಡುತ್ತಿದ್ದಾರೆ. ಇದು ಸಂತಸ ನೀಡುತ್ತಿದೆ ಎಂದು ಅವರು ತಿಳಿಸಿದ್ದಾರೆ.