ಒಬ್ಬ ಆರೋಪಿಯನ್ನು ಸಮರ್ಥಿಸುವಂತಹ ದುಸ್ಥಿತಿ ರಾಷ್ಟ್ರೀಯ ಪಕ್ಷಕ್ಕೆ ಬರಬಾರದಿತ್ತು: ಸಿಎಂ

ಬೆಂಗಳೂರು: ಕರಸೇವಕನ ಬಂಧನ ಖಂಡಿಸಿ ಬಿಜೆಪಿ ನಡೆಸಿರುವ ಪ್ರತಿಭಟನೆಗೆ ಸಿಎಂ ಸಿದ್ದರಾಮಯ್ಯ (Siddaramaiah) ಕೆಂಡಾಮಂಡಲರಾಗಿದ್ದಾರೆ. ಒಬ್ಬ ಕ್ರಿಮಿನಲ್ ಆರೋಪಿಯನ್ನು ಸಮರ್ಥಿಸುವಂತಹ ದುಸ್ಥಿತಿ ಒಂದು ರಾಷ್ಟ್ರೀಯ ಪಕ್ಷಕ್ಕೆ ಬರಬಾರದಿತ್ತು ಎಂದು ವಾಗ್ದಾಳಿ ನಡೆಸಿದ್ದಾರೆ.

ವ್ಯಕ್ತಿಯೊಬ್ಬ ಎಂತಹ ಘನಘೋರ ಅಪರಾಧ ಬೇಕಾದ್ರೂ ಎಸಗಲಿ, ಆತ ಕೇಸರಿ ಶಾಲನ್ನು ತಲೆಗೆ ಸುತ್ತಿಕೊಂಡು ನಾನೊಬ್ಬ ಹಿಂದೂ ಎಂದು ಕೂಗಿದರೆ ಬಿಜೆಪಿ ನಾಯಕರು ಆತನ ರಕ್ಷಣೆಗೆ ಧಾವಿಸುತ್ತಾರೆ. ಈ ಮೂಲಕ ಕೇಸರಿ ಶಾಲು ಮಾತ್ರವಲ್ಲ ಹಿಂದೂ ಧರ್ಮಕ್ಕೂ ಬಿಜೆಪಿ ನಾಯಕರು ಅವಮಾನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಜೈಲಲ್ಲಿ ಹಿಂದೂಗಳೇ ಹೆಚ್ಚಿದ್ದಾರೆ. ಅವರ ಪರವಾಗಿ ಬಿಜೆಪಿ (BJP) ಹೋರಾಟ ನಡೆಸುತ್ತಾ? ಎಂದು ಸಿಎಂ ಸವಾಲ್ ಹಾಕಿದ್ದಾರೆ. ಅಲ್ಲದೇ ಈ ಹಿಂದೆ ಬಿಜೆಪಿ ಅವಧಿಯಲ್ಲೇ ಯಡಿಯೂರಪ್ಪರನ್ನು ಬಂಧಿಸಿ ಜೈಲಿಗಟ್ಟಲಾಗಿತ್ತು. ಇದು ಆಗಿನ ಸರ್ಕಾರದ ಹಿಂದು ವಿರೋಧಿಯೇ ಎಂದು ಪ್ರಶ್ನಿಸಿದ್ದಾರೆ. ಹಾಗೆ ನೋಡಿದ್ರೆ ಬಿಎಸ್‍ವೈಗಿಂತ ದೊಡ್ಡ ಹಿಂದೂ ಯಾರಿದ್ದಾರೆ? ಅವರಿಗಿಂತ ದೊಡ್ಡ ರಾಮ ಭಕ್ತ ಯಾರಿದ್ದಾರೆ? ಎಂದು ಮುಖ್ಯಮಂತ್ರಿಗಳು ಕೇಳಿದ್ದಾರೆ.

ಇನ್ನು, ಹಳೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಬಂಧಿಸಿದ 36 ಆರೋಪಿಗಳ ಪಟ್ಟಿಯನ್ನು ಸಿಎಂ ಬಿಡುಗಡೆ ಮಾಡಿದ್ದಾರೆ. ಅದ್ರಲ್ಲಿ ಶ್ರೀಕಾಂತ ಪೂಜಾರಿಯನ್ನು ದೊಂಬಿ ಪ್ರಕರಣದಲ್ಲಿ ಬಂಧಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಈ ಮೂಲಕ ಶ್ರೀಕಾಂತ್ ಕರಸೇವಕ ಎಂಬ ಕಾರಣಕ್ಕೆ ಬಂಧಿಸಿಲ್ಲ, ಟಾರ್ಗೆಟ್ ಮಾಡಿಲ್ಲ, ಬಿಜೆಪಿ ಆರೋಪಗಳೆಲ್ಲಾ ಸುಳ್ಳು ಎಂಬ ಸಂದೇಶವನ್ನು ಸಿಎಂ ನೀಡಿದ್ದಾರೆ. ಇದನ್ನೂ ಓದಿ: ಬಿ.ಕೆ ಹರಿಪ್ರಸಾದ್‌ಗೆ ಮಂಪರು ಪರೀಕ್ಷೆ ಮಾಡಿಸಬೇಕು: ಸಂಗಣ್ಣ ಕರಡಿ

ಈ ಮಧ್ಯೆ ಶ್ರೀಕಾಂತ್ ಪೂಜಾರಿ ಬಂಧನವನ್ನು ಗೃಹಮಂತ್ರಿಯೂ ಸಮರ್ಥಿಸಿದ್ದಾರೆ. ಆದರೆ ಶ್ರೀಕಾಂತ್ ಬಂಧನ ಸಮರ್ಥಿಸುವ ಭರಾಟೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್, ಬೆಂಗಳೂರು-ಹುಬ್ಬಳ್ಳಿ ಗಲಭೆ ಆರೋಪಿಗಳಿಗೆ ಅಮಾಯಕರೆಂಬ ಸರ್ಟಿಫಿಕೇಟ್ ನೀಡಿದ್ದಾರೆ. ಇದು ಚರ್ಚೆಗೆ ಗ್ರಾಸವಾಗಿದೆ.