ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆಗೆ ಸಿಎಂ ಸಮರ್ಥನೆ

ಬೆಂಗಳೂರು: ಖಡಕ್ ಅಧಿಕಾರಿ ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆಯನ್ನು ಸಿಎಂ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ.

ಈ ಬಗ್ಗೆ ಬೆಂಗಳೂರಲ್ಲಿ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಆಡಳಿತಾತ್ಮಕ ದೃಷ್ಟಿಯಿಂದ ವರ್ಗ ಮಾಡಿದ್ದೇವೆ. ಇದರಲ್ಲಿ ಯಾರ ಒತ್ತಡವೂ ಇಲ್ಲ, ಯಾವ ರಾಜಕೀಯವೂ ಇಲ್ಲ. ಮಹಿಳಾ ಅಧಿಕಾರಿಗಳನ್ನು ವರ್ಗಾವಣೆ ಮಾಡಬಾರದಾ? ಕೋಲಾರ, ಮಂಡ್ಯದಲ್ಲಿ ಮಹಿಳಾ ಡಿಸಿಗಳು ಇಲ್ವಾ? ನಮ್ಮ ವಿರೋಧಿಗಳು ಪ್ರತಿಭಟನೆ ಮಾಡ್ತಿದ್ದಾರೆ ಅಷ್ಟೇ ಅಂತ ಹೇಳಿದ್ರು.

ಇತ್ತೀಚೆಗೆ ಹಾಸನ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದ ರೋಹಿಣಿ ಸಿಂಧೂರಿ ದಾಸರಿ ಅವರನ್ನು ವರ್ಗಾವಣೆಗೊಳಿಸಿ ಆದೇಶ ಹೊರಬಿದ್ದಿದೆ. ಜಿಲ್ಲೆಯಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಇದು ಐದನೇ ಜಿಲ್ಲಾಧಿಕಾರಿಯ ವರ್ಗಾವಣೆಯಾಗಿದೆ. ಈ ಹಿಂದೆ 2014ರಿಂದ ಈಚೆಗೆ ಜಿಲ್ಲೆಯಿಂದ ಎತ್ತಂಗಡಿಯಾದ ಜಿಲ್ಲಾಧಿಕಾರಿಗಳೆಂದರೆ ಮೋಹನ್ ರಾಜ್, ಅನ್ಬುಕುಮಾರ್, ಉಮೇಶ್ ಕುಸುಗಲ್,ವಿ.ಚೈತ್ರಾ ಮತ್ತು ರೋಹಿಣಿ ಸಿಂಧೂರಿ. ಇದನ್ನೂ ಓದಿ: ಹಣ ಹೊಡೆಯಲು ಬಿಟ್ಟಿಲ್ಲ ಅಂತ ಹೆಣ್ಮಗಳ ವರ್ಗ, ಸಿಎಂ ಜೊತೆ ವೇದಿಕೆ ಏರಲ್ಲ- ಸರ್ಕಾರಕ್ಕೆ ಥೂ ಎಂದು ಉಗಿದ ಹೆಚ್‍ಡಿಡಿ

ಮಂಡ್ಯ ಜಿಲ್ಲಾ ಪಂಚಾಯಿತಿ ಸಿಈಓ ಆಗಿದ್ದ ರೋಹಿಣಿ ಐದು ತಿಂಗಳ ಹಿಂದೆ ಹಾಸನ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. 2009ರ ಬ್ಯಾಚ್‍ನ ಐಎಎಸ್ ಅಧಿಕಾರಿಯಾಗಿರುವ ಸಿಂಧೂರಿ ಹಾಸನಕ್ಕೆ ಬಂದ ಕೂಡಲೆ ಕೆಲ ಆಡಳಿತಾತ್ಮಕ ಕೆಲಸಗಳ ಮೂಲಕ ಸಾರ್ವಜನಿಕರ ಪ್ರಶಂಸೆ ಗಳಿಸಿದ್ದರು. ಜೊತೆಗೆ ಹಾಸನಾಂಬೆ ದರ್ಶನೋತ್ಸವದಲ್ಲಿ ಕೆಲ ಕ್ರಮಗಳನ್ನು ಕೈಗೊಂಡಿದ್ದ ರೋಹಿಣಿ ಮೆಚ್ಚುಗೆ ಗಳಿಸಿದ್ದರು. ಮುಂದಿನ ತಿಂಗಳು ನಡೆಯಲಿರುವ ಬಾಹುಬಲಿಯ ಮಸ್ತಕಾಭಿಷೇಕದ ಯಶಸ್ಸಿಗೆ ಸಾಕಷ್ಟು ಶ್ರಮವಹಿಸಿದ್ದರು. ಆದ್ರೆ ಈಗ ಏಕಾಏಕಿ ವರ್ಗಾವಣೆ ಆಗಿರೋದು ಜಿಲ್ಲೆಯಲ್ಲಿ ಚರ್ಚೆಗೆ ಕಾರಣವಾಗಿದೆ. ಇದನ್ನೂ ಓದಿ: ಕೈ ನಾಯಕರ ದೂರಿನ ಬೆನ್ನಲ್ಲೇ ಹಾಸನ ಡಿಸಿ ರೋಹಿಣಿ ಸಿಂಧೂರಿ ಎತ್ತಂಗಡಿ

ಡಿಸಿ ವರ್ಗಾವಣೆ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರೂ ಸೇರಿದಂತೆ ಕಾಂಗ್ರೆಸ್ ನಾಯಕರ ಚಿತಾವಣೆ ಅಡಗಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಕಳೆದ 10 ರಂದು ಜಿಲ್ಲೆಗೆ ಆಗಮಿಸಿ ಇಲ್ಲಿಯೇ ವಾಸ್ತವ್ಯ ಹೂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ಕಾರ್ಯಕರ್ತರ ಮುಖಾಂತರ ಒತ್ತಡ ತಂದು ಈ ವರ್ಗಾವಣೆ ಮಾಡಲಾಗಿದೆ ಎನ್ನುವ ಆರೋಪ ಕೇಳಿಬರುತ್ತಿದೆ.

https://www.youtube.com/watch?v=FUGkTwzyPgk

Comments

Leave a Reply

Your email address will not be published. Required fields are marked *